ಅಯೋಧ್ಯೆ ರಾಮಮಂದಿರ ನಿರ್ಮಾಣ ವೆಚ್ಚ ರೂ.1300 ಕೋಟಿಗೆ ಏರಿಕೆ- ಪೇಜಾವರ ಶ್ರೀ
ಉಡುಪಿ, ಸೆ.12: ಅಯೋಧ್ಯೆಯಲ್ಲಿ 1300 ಕೋಟಿ ರೂ. ವೆಚ್ಚದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಟ್ರಸ್ಟ್ ನ ಸದಸ್ಯ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಟ್ರಸ್ಟ್ ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅಧ್ಯಕ್ಷತೆಯಲ್ಲಿ ಅಯೋಧ್ಯೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್‌ಟಿ ವೆಚ್ಚ, ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1300 ಕೋಟಿ ತಗಲ ಬಹುದೆಂದು ಅಂದಾಜಿಸಲಾಗಿದೆ. ಆದರೆ ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ನೀಡುತ್ತಿರುವ ದೇಣಿಗೆಯೂ ಭರಪೂರ ಹರಿದು ಬರುತ್ತಿದೆ. ತಿಂಗಳಿಗೆ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ದೇಣಿಗೆ ಬರುತ್ತಿದೆ. ಆದ್ದರಿಂದ ಈವರೆಗೆ ಸುಮಾರು 300 ಕೋಟಿ ಖರ್ಚನ್ನು ಹೆಚ್ಚುವರಿ ದೇಣಿಗೆಯಿಂದಲೇ ನಿರ್ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂದಿರಕ್ಕೆ ಬೇಕಾಗುವ ಸಾಗುವಾನಿ ಮರವನ್ನು ಮಹಾರಾಷ್ಟ್ರದಿಂದ ತರಿಸಿಕೊಳ್ಳಲಾಗುವುದು. ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆಂಬುದು ಭಕ್ತರ ಇಂಗಿತ. ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ ವಿಶ್ಚ ಹಿಂದು ಪರಿಷತ್ ನೇತೃತ್ವದಲ್ಲಿ ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಸಭೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದೆಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಪರಾಶರನ್ ಆನ್‌ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್, ಸದಸ್ಯರುಗಳಾದ ಪೇಜಾವರ ಶ್ರೀ ಹಾಗೂ ಇತರೆ ವಿಶ್ವಸ್ಥರು, ಗೋರಕ್ಪುರ ಜಿಲ್ಲಾಧಿಕಾರಿ, ಮಂದಿರ ನಿರ್ಮಾಣದ ಇಂಜಿನಿಯರ್, ವಾಸ್ತು ತಜ್ಞರು ಉಪಸ್ಥಿತರಿದ್ದರು.