ಪ್ರಧಾನಮಂತ್ರಿ ಜನ್ ಧನ್ ಯೋಜನೆಯಿಂದ ಮಹತ್ತರ ಬದಲಾವಣೆ: ನರೇಂದ್ರ ಮೋದಿ
ನವದೆಹಲಿ: ತಮ್ಮ ಸರ್ಕಾರದ ಪ್ರಮುಖ ಕಾರ್ಯಕ್ರಮ ಜನ್ ಧನ್ ಯೋಜನೆ ಅನೇಕ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸಿದ್ದು, ಕೋಟ್ಯಂತರ ಜನರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯೋಜನೆ ಆರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, ಆರು ವರ್ಷಗಳ ಹಿಂದೆ ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು ಬ್ಯಾಂಕ್ ಖಾತೆ ಇಲ್ಲದವರನ್ನು ಬ್ಯಾಂಕಿಂಗ್ ಸೇವೆಯಡಿಗೆ ತರುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಆರಂಭಿಸಲಾಯಿತು. ಈ ಉಪಕ್ರಮವು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಅನೇಕ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಕೋಟ್ಯಂತರ ಜನರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಜನ್ ಧನ್ ಯೋಜನೆಗೆ ಧನ್ಯವಾದಗಳು. ಈ ಯೋಜನೆಯಿಂದ ಹಲವಾರು ಕುಟುಂಬಗಳ ಭವಿಷ್ಯ ಸುರಕ್ಷಿತವಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಗ್ರಾಮೀಣ ಪ್ರದೇಶದವರು ಮತ್ತು ಮಹಿಳೆಯರಾಗಿದ್ದಾರೆ. ಯೋಜನೆ ಯಶಸ್ವಿಯಾಗಲು ಶ್ರಮಿಸಿದ ಎಲ್ಲರನ್ನೂ ಪ್ರಶಂಸಿಸುತ್ತೇನೆ ಎಂದು ನರೇಂದ್ರಮೋದಿ ಹೇಳಿದ್ದಾರೆ.