ಉಡುಪಿ ಬಡಗಬೆಟ್ಟು ಸೊಸೈಟಿ: 11 ಕೋಟಿ ರೂ. ನಿವ್ವಳ ಲಾಭ- ಶೇ.15 ಡಿವಿಡೆಂಡ್
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.
ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು.
ವರದಿ ಸಾಲಿನ ಅಂತ್ಯಕ್ಕೆ ಒಟ್ಟು 18,860 ಸದಸ್ಯರಿಂದ 4.74ಕೋಟಿ ಪಾಲು ಬಂಡವಾಳ ಹಾಗೂ 401.50 ಕೋಟಿ ಠೇವಣಿ ಇದ್ದು, 295.11ಕೋಟಿ ಹೊರ ಬಾಕಿ ಸಾಲ ಹೊಂದಿರುತ್ತದೆ. 2022ರ ಆಗಸ್ಟ್ ಅಂತ್ಯಕ್ಕೆ ಒಟ್ಟು 409.52ಕೋಟಿ ರೂ. ಠೇವಣಿ ಹಾಗೂ 316 ಕೋಟಿ ಸಾಲ ಇದೆ. ವರದಿ ಸಾಲಿನಲ್ಲಿ ಸಂಘವು 11.01 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಕಳೆದ ಸಾಲಿನಲ್ಲಿ ಸಂಸ್ಥೆ ಒಟ್ಟು 1760 ಕೋಟಿ ರೂ. ವ್ಯವಹಾರ ಮಾಡಿದೆ. ಈವರೆಗೆ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿ, ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ವಿಸ್ತರಿಸಲು ಅನುಮತಿ ಪಡೆಯಲಾಗಿದೆ. ನಗರದಲ್ಲಿ ಎರಡು ಎಕರೆ ಜಾಗದಲ್ಲಿ ಏಳು ಕೋಟಿ ರೂ. ವೆಚ್ಚದಲ್ಲಿ ಸಹಕಾರಿಗಳಿಗೆ ಸಹಕಾರಿ ಸೌಧ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪುನೀತ್ ನಾಯ್ಕ್ ಹಾಗೂ ಕೇದಾರ್ ನಾಯಕ್ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಾದ ದೀಪಾಲಿ ಹಾಗೂ ಮಾನ್ಯ, ಆಯುವೇರ್ದಿಕ್ ವೈದ್ಯಕೀಯ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆ ಡಾ.ಸ್ವಾತಿ ಅವರನ್ನು ಸನ್ಮಾನಿಸಲಾಯಿತು.
ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ, ನಿರ್ದೇಶಕರುಗಳಾದ ಹಾಜಿ ಸಯ್ಯದ್ ಅಬ್ದುಲ್ ರಜಾಕ್, ಪುರುಷೋತ್ತಮ ಶೆಟ್ಟಿ, ವಸಂತ ಕೆ.ಕಾಮತ್, ವಿನಯ ಕುಮಾರ್ ಟಿ.ಎ., ಜಯಾನಂದ ಸಿ. ಮೈಂದನ್, ಪದ್ಮನಾಭ ಕೆ.ನಾಯಕ್, ರಘುರಾಮ ಎಸ್.ಶೆಟ್ಟಿ, ಜಾರ್ಜ್ ಸ್ಯಾಮ್ಯುವೆಲ್, ಸದಾಶಿವ ನಾಯ್ಕಾ, ಜಯ ಶೆಟ್ಟಿ, ಗಾಯತ್ರಿ ಎಸ್.ಭಟ್ ಉಪಸ್ಥಿತರಿದ್ದರು.