ಹೆಬ್ರಿ: ಸಹಿ ನಕಲು ಮಾಡಿ ವಸತಿ ಯೋಜನೆ ಹಣ ಪಡೆದು ವಂಚನೆ-ದೂರು ದಾಖಲು
ಹೆಬ್ರಿ ಸೆ.11(ಉಡುಪಿ ಟೈಮ್ಸ್ ವರದಿ): ನಕಲು ಸಹಿ ಮಾಡಿ ಬಿಪಿಎಲ್ ಕಾರ್ಡ್ ನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಗೆ ಆಧಾರವಾಗಿ ನೀಡಿ ಸರ್ಕಾರದಿಂದ ದೊರೆಯುವ ಹಣವನ್ನು ಪಡೆದು ವಂಚಿಸಿರುವುದಾಗಿ ಚಾರಾ ಗ್ರಾಮದ ಹಂದಿಕಲ್ಲು ಎಂಬಲ್ಲಿನ ನಿವಾಸಿ ಸುಲೋಚನಾ ಶೆಡ್ತಿ ಎಂಬವರು ತಮ್ಮ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಚಾರಾ ಗ್ರಾಮದ ಹಂದಿಕಲ್ಲು ಎಂಬಲ್ಲಿನ ನಿವಾಸಿ ಸುಲೋಚನಾ ಶೆಡ್ತಿ ಅವರು ಪ್ರಸ್ತುತ ತೀರ್ಥಹಳ್ಳಿಯ ಬಾಳೆಬೈಲ್ಲು ಎಂಬಲ್ಲಿ ವಾಸ ಮಾಡಿಕೊಂಡಿದ್ದಾರೆ. ಆರೋಪಿ ಉಷಾ 2015-2016 ನೇ ಇಸವಿಯಲ್ಲಿ ಚಾರಾ ಗ್ರಾಮ ಪಂಚಾಯತ್ ಗೆ ನಮೂನೆ -1 ರಲ್ಲಿ ಅರ್ಜಿ ಸಲ್ಲಿಸಿ ಅರ್ಜಿಯಲ್ಲಿ ಕುಟುಂಬ ಮುಖ್ಯಸ್ಥರ/ ಸದ್ಯಸರ ಸಹಿ ಇರುವ ಜಾಗದಲ್ಲಿ ಸುಲೋಚನಾ ಶೆಡ್ತಿ ಅವರ ಸಹಿಯನ್ನು ನಕಲು ಮಾಡಿ, ಅವರ ಅನುಮತಿ ಇಲ್ಲದೇ ಅವರ ಬಿಪಿಎಲ್ ಕಾರ್ಡ್ ನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಗೆ ಆಧಾರವಾಗಿ ನೀಡಿ ಸರ್ಕಾರದಿಂದ ದೊರೆಯುವ ಹಣವನ್ನು ಪಡೆದು ಸುಲೋಚನಾ ಅವರಿಗೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ ಚಾರಾ ಗ್ರಾಮದ ಹಂದಿಕಲ್ಲು ಎಂಬಲ್ಲಿನ ನಿವಾಸಿ ಉಷಾ ಶೆಟ್ಟಿ ಅವರೂ ಪೊಲೀಸರಿಗೆ ದೂರು ನೀಡಿದ್ದು, ನಿನ್ನೆ ಮಧ್ಯಾಹ್ನದ ವೇಳೆ ಉಷಾ ಅವರು ಮನೆಯಲ್ಲಿ ಇದ್ದ ವೇಳೆ ಅವರ ಗಂಡನ ಅಕ್ಕನ ಗಂಡ ಕೃಷ್ಣ ಶೆಟ್ಟಿ ಎಂಬವರು ಕಾರಿನಲ್ಲಿ ಬಂದು ಉಷಾ ಅವರ ಗಂಡನ ಬಗ್ಗೆ ವಿಚಾರಿಸಿದ್ದು, ಈ ವೇಳೆ ಉಷಾ ಅವರು ತಮ್ಮ ಗಂಡ ಕೆಲಸಕ್ಕೆ ಹೋಗಿದ್ದಾರೆಂದು ತಿಳಿಸಿದ್ದರು. ಅಗ ಅಪಾದಿತ ಕೃಷ್ಣ ಶೆಟ್ಟಿಯು ಉಷಾ ಅವರಿಗೆ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಎರಡೂ ಘಟನೆಗೆ ಸಂಬಂಧಿಸಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.