ಬೀದಿ ನಾಯಿ ಕಚ್ಚಿದರೆ ಅದಕ್ಕೆ ಆಹಾರ ಹಾಕುವವರು ಜವಾಬ್ದಾರರು- ಸುಪ್ರೀಂ
ನವದೆಹಲಿ ಸೆ.11: ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಬೀದಿ ನಾಯಿ ಕಚ್ಚಿದರೆ ಅದಕ್ಕೆ ಆಹಾರ ಹಾಕುವವರು ಜವಾಬ್ದಾರರು ಎಂದು ಹೇಳಿದೆ.
ಈ ಬಗ್ಗೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, “ನಮ್ಮ ದೇಶದಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ಕೂಡ ನಾಯಿಗಳಿಗೆ ಆಹಾರ ನೀಡುತ್ತೇನೆ. ಆದರೆ, ಜನರು ನಾಯಿಗಳಿಗೆ ಆಹಾರ ಹಾಕುವುದರ ಜೊತೆಗೆ ಅವುಗಳ ಕಾಳಜಿ, ಜವಾಬ್ದಾರಿಯನ್ನೂ ತೆಗೆದು ಕೊಳ್ಳಬೇಕು. ಬೀದಿ ನಾಯಿಗಳಿಗೆ ಪ್ರತಿದಿನ ಆಹಾರ ನೀಡುವ ಜನರಿಗೆ ಅವುಗಳ ಲಸಿಕೆಯ ಜವಾಬ್ದಾರಿಯನ್ನು ನೀಡಬಹುದು. ಒಂದು ವೇಳೆ ಅವರು ಆಹಾರ ಹಾಕುವ ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಅವರೇ ಆ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಹೇಳಿದೆ.
ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಪ್ರತಿ ವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿ, ಈ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ ಹಾಗೂ ಈ ವಿಷಯದಲ್ಲಿ ಉತ್ತರಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ.
ವಿಶೇಷವಾಗಿ ಕೇರಳ ಮತ್ತು ಮುಂಬೈನಲ್ಲಿ ಬೀದಿ ನಾಯಿಗಳನ್ನು ಕೊಲ್ಲುವ ಕುರಿತು ವಿವಿಧ ನಾಗರಿಕ ಸಂಸ್ಥೆಗಳು ಹೊರಡಿಸಿದ ಆದೇಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಅರ್ಜಿಗಳ ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಕೆಲವು ಎನ್ಜಿಒಗಳು ಮತ್ತು ವೈಯಕ್ತಿಕ ಅರ್ಜಿದಾರರು ಬಾಂಬೆ ಹೈಕೋರ್ಟ್ ಮತ್ತು ಕೇರಳ ಹೈಕೋರ್ಟ್ ಸೇರಿದಂತೆ ಕೆಲವು ಹೈಕೋರ್ಟ್ಗಳ ತೀರ್ಪುಗಳ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನಿಯಮಗಳ ಪ್ರಕಾರ ಬೀದಿ ನಾಯಿಗಳ ಕಾಟವನ್ನು ಎದುರಿಸಲು ಪುರಸಭೆಯ ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
2019ರಿಂದ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ (27,52,218), ತಮಿಳುನಾಡು (20,70,921), ಮಹಾರಾಷ್ಟ್ರ (15,75,606) ಮತ್ತು ಪಶ್ಚಿಮ ಬಂಗಾಳ(12,09,232)ದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ, ಲಕ್ಷದ್ವೀಪದಲ್ಲಿ ಇದುವರೆಗೂ ಯಾವುದೇ ನಾಯಿ ಕಡಿತದ ಪ್ರಕರಣಗಳು ವರದಿಯಾಗಿಲ್ಲ. 2019ರಲ್ಲಿ 72,77,523 ನಾಯಿ ಕಡಿತವಾಗಿವೆ. 2020ರಲ್ಲಿ 46,33,493 ಮತ್ತು ಒಂದು ವರ್ಷದ ನಂತರ 17,01,133ಕ್ಕೆ ಇಳಿದಿದೆ. ಆದರೆ, 2022ರ ಮೊದಲ 7 ತಿಂಗಳು ಕೇವಲ 14.5 ಲಕ್ಷ ಪ್ರಕರಣಗಳನ್ನು ದಾಖಲಿಸಿವೆ. ಈ ವರ್ಷ ಅತಿ ಹೆಚ್ಚು ಪ್ರಕರಣಗಳು ತಮಿಳುನಾಡು (251,510) ಮತ್ತು ಮಹಾರಾಷ್ಟ್ರ (231,531)ದಲ್ಲಿ ದಾಖಲಾಗಿವೆ. ಭಾರತವು ಪ್ರತಿ ವರ್ಷ 100ಕ್ಕೂ ಹೆಚ್ಚು ರೇಬೀಸ್ ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತದೆ ಎಂದು ತಿಳಿದು ಬಂದಿದೆ.