ಕೊಲ್ಲೂರು: ಮಗನನ್ನು ರಕ್ಷಿಸಲು ನದಿಗೆ ಧುಮುಕಿದ ತಾಯಿ ನಾಪತ್ತೆ
ಬೈಂದೂರು: ತಾಲೂಕಿನ ಕೊಲ್ಲೂರು ಗ್ರಾಮದ ಸೌರ್ಪಾಣಿಕ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗನನ್ನು ರಕ್ಷಣೆ ಮಾಡಲು ನದಿಗೆ ಧುಮುಕಿದ ಪ್ರವಾಸಿ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಸೆ.10ರಂದು ನಡೆದಿದೆ.
ಕೇರಳದ ತಿವೇಂಡ್ರಂ ಜಿಲ್ಲೆಯ ಕಾಚಾಗಡ ಗ್ರಾಮದ ನಿವಾಸಿ 42 ವರ್ಷದ ಚಾಂದಿ ಶೇಖರ್ ನೀರಿನಲ್ಲಿ ಕೊಚ್ಚಿಹೋದ ಮಹಿಳೆ. ಇವರು ಪತಿ ಮುರುಗನ್, ಮಗ ಆದಿತ್ಯನ್ ಹಾಗೂ ಸಂಬಂಧಿಗಳೊಂದಿಗೆ ಓಣಂ ಹಬ್ಬದ ಪ್ರಯುಕ್ತ ಕೇರಳದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರವಾಸ ಕೈಗೊಂಡಿದ್ದರು.
ನಿನ್ನೆ ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡಿದ್ದು, ಸಂಜೆ ಕುಟುಂಬದವರೊಂದಿಗೆ ಸೌರ್ಪಾಣಿಕ ಘಟ್ಟಕ್ಕೆ ಹೋಗಿದ್ದರು. ಈ ವೇಳೆ ನದಿದಡದಲ್ಲಿ ಸ್ನಾನ ಮಾಡುತ್ತಿರುವಾಗ ಚಾಂದಿ ಶೇಖರ್ ಅವರ ಪತಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು. ಅವರನ್ನು ರಕ್ಷಣೆ ಮಾಡಲು ಮಗ ಆದಿತ್ಯನ್ ಧುಮುಕಿದ್ದು, ಆತನು ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಆತನನ್ನು ರಕ್ಷಣೆ ಮಾಡಲು ಈಜು ಬಾರದ ಆತನ ತಾಯಿ ಚಾಂದಿಶೇಖರ್ ನೀರಿಗೆ ಧುಮುಕಿ ನೀರಿನ ಸೆಳತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಪತಿ ಮುರುಗನ್ ಮತ್ತು ಮಗ ಆದಿತ್ಯನ್ ರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.