ನೆರೆಯಿಂದ ಜನ, ಜಾನುವಾರು ಸತ್ತಿರುವುದೂ ಬಿಜೆಪಿ ಕಾಲ್ಗುಣದಿಂದಲೆಯೇ?- ಅನ್ಸಾರ್ ಅಹ್ಮದ್
ಉಡುಪಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯವರು ಬಿಜೆಪಿಯ ಕಾಲ್ಗುಣ ಚೆನ್ನಾಗಿರುವುದರಿಂದ ಕರ್ನಾಟಕದಲ್ಲಿ ಮಳೆಯಾಗಿದೆ ಎಂದಿರುವುದನ್ನು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ರವರು ಖಂಡಿಸಿರುತ್ತಾರೆ.
ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿ ಹಾಗೂ ಹಾಸ್ಯಸ್ಪದವಾಗಿದೆ. ನೆರೆಯಿಂದಾಗಿ ಆಗಿರುವ ಅನಾಹುತ ಹಾಗೂ ನೆರೆ ಪೀಡಿತ ಸಂತ್ರಸ್ತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ನೀಡುವುದು ಅವರ ಹುದ್ದೆಗೆ ಶೋಭೆ ತರುವಂತದ್ದಲ್ಲ. ರಾಜ್ಯದಲ್ಲಿ ಉಂಟಾಗಿರುವ ಅವ್ಯಾಹತ ಮಳೆ ಬಿಜೆಪಿಯ ಕಾಲ್ಗುಣ ಎಂದಾದರೆ ನೆರೆಯಿಂದಾಗಿ ಜನ ಜಾನುವಾರುಗಳು ಪ್ರಾಣ ತೆತ್ತಿರುವುದು ಸಹ ಬಿಜೆಪಿ ಪಕ್ಷದ ಕಾಲ್ಗುಣದ ಪರಿಣಾಮವೇ ಎಂಬುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರು ಜನತೆಗೆ ತಿಳಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.