ಬಜಗೋಳಿಯ ನೀರುಳ್ಳಿ ಬಜೆಯಿಂದಾಗಿ ಚೂರಿಯಲ್ಲಿ ಇರಿಯುವವರೆಗೆ……
ಕಾರ್ಕಳ ಸೆ.11(ಉಡುಪಿ ಟೈಮ್ಸ್ ವರದಿ): ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಮಾರ್ಕೆಟ್ ಬಳಿ ಸ್ಪ್ರಿಂಗ್ ಆನಿಯನ್ ಕೊಳ್ಳುವ ವಿಚಾರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ನಿನ್ನೆ ಬೆಳಿಗ್ಗೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಮಾರ್ಕೆಟ್ ನಲ್ಲಿರುವ ನೂರಾಳ್ ಬೆಟ್ಟುವಿನ ಜಿನೇಶ್ ಎಂಬವರ ಅಂಗಡಿಗೆ ಎದುರಿನ ಅಂಗಡಿಯಲ್ಲಿರುವ ಮುಡಾರು ಗ್ರಾಮದ ನಿವಾಸಿ ಪ್ರಸನ್ನ ಇವರು ಬಂದು 2 ಕಟ್ಟು ಸ್ಪ್ರಿಂಗ್ ಆನಿಯನ್ ಕೇಳಿದ್ದರು. ಈ ವೇಳೆ ಅವರಿಗೆ ಸ್ಪ್ರಿಂಗ್ ಆನಿಯನ್ ಕೊಟ್ಟು 40 ರೂ ಕೇಳಿದ್ದರು. ಇದಕ್ಕೆ ಏಕಾಏಕಿ ಸಿಟ್ಟುಗೊಂಡ ಪ್ರಸನ್ನನು “ಯಾರಿಗೆ ಬೇಕು ನಿನ್ನ ಸ್ಪ್ರಿಂಗ್ ಆನಿಯನ್” ಎಂದು ಬಿಸಾಡಿ ಅಲ್ಲಿಯೇ ಕ್ರೇಟ್ ನಲ್ಲಿದ್ದ ಚೂರಿ ತೆಗೆದು ಜಿನೇಶ್ ಅವರಿಗೆ ಚುಚ್ಚಲು ಬಂದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಜಿನೇಶ್ ಅವರ ಬೆನ್ನಿಗೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ ಪ್ರಸನ್ನನು ಬೆದರಿಕೆ ಹಾಕಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಜಿನೇಶ್ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿ ಪ್ರಸನ್ನ ಅವರ ಪತ್ನಿ ಪ್ರತಿಮಾ ಕೂಡಾ ಪೊಲೀಸರಿಗೆ ದೂರು ನೀಡಿದ್ದು, ಬಜಗೋಳಿ ಮಾರ್ಕೆಟ್ ನಲ್ಲಿರುವ ಜಿನೇಶ್ ಇವರ ಅಂಗಡಿಗೆ ಪ್ರತಿಮಾ ಅವರ ಗಂಡ ಪ್ರಸನ್ನ ರವರು ಸ್ಪ್ರಿಂಗ್ ಆನಿಯನ್ ಕೊಳ್ಳಲು ಹೋಗಿದ್ದ ವೇಳೆ, ಪ್ರಸನ್ನ ಹಾಗೂ ಜಿನೇಶ್ ನಡುವೆ ಸ್ಟ್ರೀಂಗ್ ಆನಿಯನ್ ನ ಹಣವನ್ನು ಕೊಡುವ ವಿಚಾರದಲ್ಲಿ ಗಲಾಟೆ ಆಗಿದ್ದು, ಈ ವೇಳೆ ಜಿನೇಶ್, ಪ್ರಸನ್ನ ಅವರಿಗೆ ಹಲ್ಲೆ ಮಾಡಿದ್ದು, ತಡೆಯಲು ಹೋದ ಪ್ರತಿಮಾ ಅವರಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.