ವ್ಯಾಯಾಮಕ್ಕೂ ಇರಲಿ ಮಿತಿ, ಏಕಾಏಕಿ ಹೆಚ್ಚಿಸುವುದು ಸಲ್ಲದು-ಹೃದ್ರೋಗ ತಜ್ಞ ಡಾ.ಸಿ. ಎನ್.ಮಂಜುನಾಥ
ಮೈಸೂರು ಸೆ.11: ನಟ ಪುನೀತ್ ರಾಜ್ ಕುಮಾರ್ ಅವರು ಜಿಮ್ ನಲ್ಲಿ ಬೆವರಿಳಿಸಿ, ವರ್ಕ್ ಔಟ್ ಮಾಡಿದ ಕಾರಣಕ್ಕೆ ಹೃದಯಾಘಾತಾವಾಯಿತು ಎನ್ನುವುದು ತಪ್ಪು. ಅವರು ಹೃದಯಸ್ಥಂಭನದಿಂದ ಕೊನೆಯುಸಿರೆಳೆದಿದ್ದರು ಅದು ಅನುವಂಶೀಯ ಕಾರಣದಿಂದಲೂ ಬಂದಿರುವ ಸಾಧ್ಯತೆ ಇರುತ್ತದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ ಅವರು ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೃದಯಾಘಾತಕ್ಕೆ ವಿವಿಧ ಕಾರಣಗಳು ಇರುತ್ತವೆ. ಇಂಥದ್ದೇ ಕಾರಣಕ್ಕೆ ಎಂದು ಹೇಳುವುದು ಕಷ್ಟ. ಆದರೆ, ಜೀವನಶೈಲಿ ಸರಿಯಾಗಿದ್ದರೆ ಹಾರ್ಟ್ ಅಟ್ಯಾಕ್ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದರು.
ಹೃದಯಾಘಾತದ ಕುರಿತು ಮುಂಜಾಗ್ರತೆ ಅಗತ್ಯ. ಮೇಲ್ನೋಟಕ್ಕೆ ಎಲ್ಲವೂ ಸರಿ ಇರುತ್ತದೆ. ಆದರೆ ಸಮಸ್ಯೆ ತೀವ್ರವಾಗಿರುತ್ತದೆ. ವ್ಯಾಯಾಮದಲ್ಲಿಯೂ ಮಿತಿ ಇರಬೇಕು. ಏಕಾಏಕಿ ವ್ಯಾಯಾಮ ಹೆಚ್ಚಿಸುವುದು, ಹೆಚ್ಚು ತಿಂದಿದ್ದೇನೆ ಎಂದು ಹೆಚ್ಚು ಬಾರ ಎತ್ತುವುದು ಮಾಡಬಾರದು. ಕಾಲಕಾಲಕ್ಕೆ ಪರೀಕ್ಷೆಗೆ ಒಳಗಾಗಬೇಕು, ಮುಖ್ಯವಾಗಿ ಜಿಮ್ ಸೇರುವ ಮುನ್ನ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು ಎಂದು ಅವರು ತಿಳಿಸಿದರು.
ಹಿಂದೆ ಮಕ್ಕಳು ತಮ್ಮ ಪೋಷಕರನ್ನು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಇಂದು ತಂದೆ, ತಾಯಂದಿರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಪಟ್ಟಣ ಹಾಗೂ ಹಳ್ಳಿಯ ಜೀವನ ಶೈಲಿ ಒಂದೇ ಆಗಿದೆ. ಹೃದಯ ಸಮಸ್ಯೆ ಅನುವಂಶೀಯತೆಯಿಂದಲೂ ಬರುತ್ತದೆ. ತಂದೆ- ತಾಯಿ ಸುಮಾರು 80 ವರ್ಷ ಯಾವುದೇ ಕಾಯಿಲೆ ಇಲ್ಲದೆ ಬದುಕಿದರೆ ಅದೂ ಮಕ್ಕಳಿಗೆ ಕೊಡುವ ಭಾಗ್ಯ. ಅನುವಂಶೀಯ ಕಾರಣಗಳಿಂದ ಅಪ್ಪುಗೆ ಹೃದಯಘಾತ ಆಗಿರಬಹುದು. ರಾಜ್ ಕುಟುಂಬದಲ್ಲಿ ರಾಘವೇಂದ್ರ ರಾಜಕುಮಾರ, ಶಿವರಾಜ ಕುಮಾರಗೂ ಹೃದಯ ಸಂಬಂಧಿ ಕಾಯಿಲೆ ಇದೆ. ಅಳತೆ ಮೀರಿದ ಅಪೇಕ್ಷೆಗಳನ್ನೇ ಒತ್ತಡ ಎಂದು ಕರೆಯುತ್ತೇವೆ. ಚಿಕ್ಕ ಮಕ್ಕಳಿಗೆ ನಿದ್ರೆ ಇಲ್ಲದೆ ಒತ್ತಡ ನೀಡುತ್ತಿದ್ದೇವೆ. ಇಂದಿನ ಜನರಿಗೆ ತಾಳ್ಮೆ ಇಲ್ಲದಂತಾಗಿದೆ. ತುಂಬ ಕೋಪ ಮಾಡಿಕೊಳ್ಳುವುದು ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ ಎಂದರು.
ದೇಶದಲ್ಲಿ ಸುಮಾರು 7 ಕೋಟಿ ಮಂದಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಬೇಕು. ಆಸ್ಪತ್ರೆಯ ಔಷಧವೇ ಔಷಧ ಎಂದು ತಿಳಿಯಬಾರದು. ನಾವು ತಿನ್ನುವ ತರಕಾರಿ, ನಗು, ವಾರದಲ್ಲಿ ಒಂದು ಹೊತ್ತು ಊಟ ಬಿಡುವುದು, ಒಳ್ಳೆಯ ಸ್ನೇಹಿತರು, ನಿಯಮಿತ ವ್ಯಾಯಾಮ, ನಡಿಗೆ ಎಲ್ಲವೂ ಔಷಧವೇ. ಇದರ ಜೊತೆಗೆ ಒಳ್ಳೆಯ ಸೇಹಿತರನ್ನು ಹೊಂದಬೇಕು ಎಂದರು.
ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುವವರು ಲಿಫ್ಟ್ ನ ಬದಲಿಗೆ ಮೆಟ್ಟಿಲುಗಳನ್ನು ಬಳಸಬೇಕು. ಆಗ ನಮಗಿರುವ ಹೃದಯ ಸಮಸ್ಯೆ ಗೊತ್ತಾಗುತ್ತದೆ. ಶ್ರೀಮಂತರ ರೋಗವಾಗಿದ್ದ ಹೃದಯಾಘಾತವು ಈಗ ಎಲ್ಲಾ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿದೆ. ಯುವಕರು ಭವಿಷ್ಯದ ಬಗ್ಗೆ ಯೋಚಿಸಿ ಯೋಚಿಸಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಫಾಸ್ಟ್ಫುಡ್ನ ವ್ಯಾಖ್ಯಾನವೇನೆಂದರೆ ಬೇಗನೆ ಕರೆದೊಯ್ಯುವುದು ಎಂಬಂತಾಗಿದೆ ಎಂದು ಅವರು ಹೇಳಿದರು.
ಸುಮ್ಮನೆ ಕೂರುವುದು ಒಂದು ರೋಗದಂತೆ. ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಪಾಶ್ರ್ವವಾಯು, ಕ್ಯಾನ್ಸರ್, ಒಂಟಿತನ ಕೂಡ ಒಂದು ಸಾಂಕ್ರಾಮಿಕ ರೋಗ. ನಮ್ಮ ಆರೋಗ್ಯವು ನಮ್ಮ ಮಾತು ಮತ್ತು ಕೈಯಲ್ಲಿದೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಜಾಲತಾಣವು ಸಮಾಜದ ಸ್ವಾಸ್ಥ್ಯ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ತಪ್ಪು ಸಂದೇಶವನ್ನು ಬಹಳ ಬೇಗ ಬಿತ್ತರಿಸುತ್ತಿದೆ ಎಂದು ಅವರು ಹೇಳಿದರು
ಹುಬ್ಬಳ್ಳಿಯಲ್ಲಿ 400 ಹಾಸಿಗೆಯ ಆಸ್ಪತ್ರೆ ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆಯ ಜಯದೇವ ಹೃದ್ರೋಗ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ವಿಭಾಗವಾರು ಆಸ್ಪತ್ರೆಗಳನ್ನು ತೆರೆಯುತ್ತಿದ್ದು, ಬೆಂಗಳೂರು ಮೈಸೂರು ನಂತರ ಹುಬ್ಬಳ್ಳಿಯಲ್ಲಿ ಈಗ ತರೆಯುತ್ತಿದ್ದೇವೆ. ಮುಂದೆ ಬೆಳಗಾವಿಯಲ್ಲಿ ತೆರೆಯುವ ಉದ್ದೇಶವಿದೆ. ಆದರೆ ಜಿಲ್ಲಾವಾರು ತೆರೆಯುತ್ತ ಹೋದರೆ ನಿರ್ವಹಣೆ ಸಾಧ್ಯವಾಗದೆ ಬಾಗಿಲು ಮುಚ್ಚಬೇಕಾಗುತ್ತದೆ ಈ ಬಗ್ಗೆ ಸರ್ಕಾರ ಕೂಡ ಚಿಂತನೆ ನಡೆಸಬೇಕು ಎಂದರು.
ಇಸ್ಫೋಸಿಸ್ ಸಂಸ್ಥೆಯು 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಇದರ ಸೇವೆಯನ್ನು ತಲುಪಿಸಬೇಕು. ನಮ್ಮಲ್ಲಿ ಮೊದಲು ಸೇವೆ, ನಂತರ ಉಳಿದದ್ದು. ಬೇರೆ ಆಸ್ಪತ್ರೆಗಳಂತೆ ಹಣ ಪಾವತಿಸಲೇಬೇಕು, ದಾಖಲಾತಿ ಕಡ್ಡಾಯ ಎಂಬುದೆಲ್ಲ ಇಲ್ಲ. ಮೊದಲು ಸೇವೆ ಎಂದು ಅವರು ಹೇಳಿದರು. ಇದೇ ವೇಳೆ ಕಟ್ಟಡ ನಿರ್ಮಿಸಿದರೆ ಸಾಲದು, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಮಾನವ ಸಂಪನ್ಮೂಲ ಸೃಜಿಸಬೇಕು. ಇದಾಗದಿದ್ದರೆ ಸರ್ಕಾರ ಎಷ್ಟೇ ಆಸ್ಪತ್ರೆ ಕಟ್ಟಿಸಿದರೂ ಉದ್ಘಾಟನೆಯಾಗಿ ಜನರಿಗೆ ಸೇವೆ ಲಭಿಸುವುದಿಲ್ಲ. ನಾನು ನಿವೃತ್ತಿ ಬಳಿಕ ರಾಜಕೀಯಕ್ಕೆ ಹೋಗುವುದಿಲ್ಲ, ಆದರೆ ಆರೋಗ್ಯ ಕ್ಷೇತ್ರವನ್ನು ಮುನ್ನಡೆಸುವ ಯಾವುದಾದರೂ ಜವಾಬ್ದಾರಿ ನೀಡಿದರೆ ಹೊರಲು ಸಿದ್ಧವಿದ್ದೇನೆ ಎಂದು ಅವರು ತಿಳಿಸಿದರು.