ಕುಂದಾಪುರ: ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ತಡೆದ ಅಧಿಕಾರಿಗಳು
ಕುಂದಾಪುರ, ಸೆ.11: ಅಪ್ರಾಪ್ತ ಬಾಲಕಿಗೆ ನಡೆಸಲು ನಿರ್ಧರಿಸಿದ್ದ ನಿಶ್ಚಿತಾರ್ಥವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇತೃತ್ವದ ತಂಡ ತಡೆದು ಪೋಷಕರಿಗೆ ಕಾನೂನು ಮಾಹಿತಿ ನೀಡಿರುವ ಘಟನೆ ಕಿರಿಮಂಜೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಸೆ.9ರಂದು ಬೆಳಿಗ್ಗೆ ನಿಶ್ಚಿತಾರ್ಥ ನಡೆಸಲು ಸಿದ್ದತೆ ನಡೆಯುತ್ತಿದ್ದ ಬಾಲಕಿಯ ಮನೆಗೆ ಭೇಟಿ ನೀಡಿದ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹೇಶ್, ಗ್ರಾಪಂ ಉಪಾಧ್ಯಕ್ಷ ಶೇಖರ್ ಖಾರ್ವಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್, ಗ್ರಾಮ ಲೆಕ್ಕಿಗ, ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತರ ತಂಡ ನಿಶ್ಚಿತಾರ್ಥ ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸಿತು.
ಬಳಿಕ ಅಪ್ರಾಪ್ತ ಬಾಲಕಿ ಹಾಗೂ ಹುಡುಗನ ಮನೆಯವರಿಗೆ ಸಮಾಲೋಚನೆ ನಡೆಸಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಬಾಲಕಿಯ ವಯಸ್ಸಿನ ಬಗ್ಗೆ ತಪ್ಪುಮಾಹಿತಿ ನೀಡಿರುವುದಾಗಿ ವರನ ಕಡೆಯವರು ನೀಡಿದ ಹೇಳಿಕೆಯಲ್ಲಿ ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿ ಹಾಗೂ ಪೋಷಕರನ್ನು ಹಾಜರು ಪಡಿಸಿ, ಬಾಲಕಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಮದುವೆ ಮಾಡದಿರುವ ಬಗ್ಗೆ ತಿಳಿಹೇಳಿ ಬಾಲಕಿಯನ್ನು ಪೋಷಕರ ಸುಪರ್ದಿಗೆ ನೀಡಲಾಯಿತು ಎಂದು ತಿಳಿದು ಬಂದಿದೆ.