ದಕ್ಷಿಣದಲ್ಲಿ ಕಾಂಗ್ರೆಸ್ ಜೋಡೋ, ಉತ್ತರದಲ್ಲಿ ಪಕ್ಷ ತೊರೆಯುತ್ತಿದ್ದಾರೆ- ಸುನಿಲ್ ಕುಮಾರ್
ಉಡುಪಿ ಸೆ.10(ಉಡುಪಿ ಟೈಮ್ಸ್ ವರದಿ): ದೇಶ ಮುರಿದವರಿಗೆ ಭಾರತ್ ಜೋಡೋ ಮಾಡುವ ನೈತಿಕತೆ ಇಲ್ಲ. ದೇಶ ಮುರಿದವರು ಭಾರತ ಜೋಡೋ ಹೇಗೆ ಮಾಡುತ್ತಾರೆ..? ಎಂದು ಇಂಧನ ಮತ್ತು ಕನ್ನಡ ಸಂಸ್ಕøತಿ ಸಚಿವ ವಿ ಸುನಿಲ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಇಂದು ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಣದಲ್ಲಿ ಭಾರತ ಜೋಡೋ ಅಂದ್ರೆ ಉತ್ತರದಲ್ಲಿ ಕಾಂಗ್ರೆಸ್ ಚೋಡೋ ಎಂದು ಹೋಗುತ್ತಿದ್ದಾರೆ. ದಕ್ಷಿಣದವರು ಯಾತ್ರೆ ಮುಗಿಸಿ ಉತ್ತರ ತಲುಪುವಾಗ ಅಲ್ಲಿ ಕಾಂಗ್ರೆಸ್ ಇರಲ್ಲ. ದಕ್ಷಿಣದಲ್ಲಿ ಕಾಂಗ್ರೆಸ್ ಜೋಡೋ ನಡೆಯುತ್ತಿದ್ದರೆ. ಉತ್ತರದಲ್ಲಿ ಹಿರಿಯ ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ ಮೊದಲು ಕಾಂಗ್ರೆಸ್ ಜೋಡೋ ಮಾಡಿ, ಇಲ್ಲದಿದ್ದರೆ ಮಧ್ಯಪ್ರದೇಶ ದಾಟುತ್ತಿದ್ದಂತೆ ಒಬ್ಬರೇ ಏಕಾಂಗಿಯಾಗಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಉತ್ತರದಲ್ಲಿ ಪಾದಯಾತ್ರೆ ಮೊಟಕುಗೊಳಿಸಿ ಕಾಂಗ್ರೆಸ್ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಗೆ ಸಲಹೆ ನೀಡಿದ್ದಾರೆ.
ಇಂಧನ ಇಲಾಖೆ ಮಾಜಿ ಸಚಿವ ಡಿಕೆಶಿ ವಿರುದ್ಧ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಚರ್ಚೆ ನಾನು ಪ್ರಾರಂಭಿಸಿದ್ದಲ್ಲ, ನಾನು ಡಿಕೆಶಿಗೆ ಸವಾಲು ಹಾಕಿಲ್ಲ ಅವರೇ ಸವಾಲು ಹಾಕಿರೋದು, ಅವರು ಸವಾಲು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದೇನೆ. ಅವರ ವಿರುದ್ಧ ಯಾವ ರೀತಿ ತನಿಖೆ ಎಂದು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ. ಸರ್ಕಾರಿ ಹಂತದಲ್ಲಿ ತನಿಖೆ ಆಗುವಾಗ ಬಹಿರಂಗ ಆಗಲೇ ಬೇಕಲ್ಲಾ ಅದನ್ನು ನಿಮ್ಮ ಬಳಿ ನಾನು ಹೇಳಿಯೇ ಹೇಳುತ್ತೇನೆ ಏನಾಗುತ್ತೆ ಕಾದು ನೋಡಿ ಎಂದಿದ್ದಾರೆ.
ಇದೇ ವೇಳೆ ನಾರಾಯಣ ಗುರು ಜಯಂತಿ ದ.ಕ ಜಿಲ್ಲೆಯಲ್ಲಿ ವಿವಾದ ವಿಚಾರವಾಗಿ ಮಾತನಾಡಿದ ಅವರು, ಮಹಾಪುರುಷರ ಜಯಂತಿಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಆಚರಿಸಲು ಆರು ತಿಂಗಳ ಹಿಂದೆಯೇ ಸರ್ಕಾರ ನಿರ್ಧರಿಸಿತ್ತು. ಈವರೆಗೆ ನಮ್ಮಲ್ಲಿ ಮಹಾಪುರುಷರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಿ, ಅವರ ಆದರ್ಶ ಒಂದು ವ್ಯವಸ್ಥೆಗೆ ಸೀಮಿತವಾಗಿತ್ತು. ಆದರೆ ಮುಂದೆ ಇದು ಆಗಬಾರದು ಎಂಬ ಉದ್ದೇಶದಿಂದ ಮಹಾಪುರುಷರು, ದಾರ್ಶನಿಕರ ಜಯಂತಿಯನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡಬೇಕು ಎಂದು ಹೇಳಿದ್ದೆ. ಇದನ್ನು ಕೇವಲ ಬೆಂಗಳೂರು ಮಾತ್ರಕ್ಕೆ ಕೇಂದ್ರೀಕರಿಸದೆ ಪ್ರತಿ ಜಿಲ್ಲೆಯನ್ನು ಕೇಂದ್ರೀಕರಿಸುವುದು ನಮ್ಮ ಉದ್ದೇಶ. ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಮಾಡಬೇಕು ಅನ್ನೋದು ಸರ್ಕಾರದ ಉದ್ದೇಶ. ಅದರಂತೆ ಎಲ್ಲಾ ಸಮುದಾಯದವರು ಸೇರಿ ಒಂದೊಂದು ಜಯಂತಿ ಆಚರಿಸಬೇಕು. ಇದರಲ್ಲಿ ಯಾವುದೇ ವಿವಾದ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಮಹಾನೆರೆ ಸರಕಾರ ವೈಫಲ್ಯ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಅಕಾಲಿಕವಾಗಿ ಸುರಿದ ಮಳೆಯಿಂದ ನೆರೆ ಉಂಟಾಗಿದೆ. ಏಕಕಾಲದಲ್ಲಿ ಮಳೆ ಸುರಿದರೆ ಪ್ರವಾಹ ಬಂದೇ ಬರುತ್ತದೆ. ನೂರಿನ್ನೂರು ವರ್ಷಗಳ ಬಳಿಕ ಈ ಪ್ರಮಾಣದ ಮಳೆಯಾಗಿದೆ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ನೆರೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಅನ್ನೋದು ಜನರ ಅಭಿಪ್ರಾಯ. ನಾವು ಜನರ ಭಾವನೆಗಳನ್ನು ಗೌರವಿಸುತ್ತೇವೆ.
ಈ ಬಗ್ಗೆ ರಾಜ್ಯ ಸರ್ಕಾರ ಕೈ ಕಟ್ಟಿಕೊಂಡು ಕುಳಿತಿಲ್ಲ. 1500 ವಿದ್ಯುತ್ ಕಂಬಗಳನ್ನು ಇಂಧನ ಇಲಾಖೆ 48 ಗಂಟೆಗಳಲ್ಲಿ ಸರಿಪಡಿಸಿದೆ. ಎಲ್ಲಾ ಇಲಾಖೆಗಳು ತ್ವರಿತವಾಗಿ ಕೆಲಸ ಮಾಡಿದೆ ಎಂದರು. ಹಾಗೂ ಬೆಂಗಳೂರಿನಲ್ಲಿ ನೆರೆ ಉಂಟಾದ್ದರಿಂದ ವಿಚಾರಕ್ಕೆ ಮಹತ್ವ ದೊರಕಿದೆ. ಪ್ರಕೃತಿಯ ಮುಂದೆ ನಾವೆಲ್ಲರೂ ತಲೆಬಾಗಲೇಬೇಕು ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಚ್ಚರಿಕೆ ಏನು ಎಂಬುದು ಅರಿವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಅಲ್ಲಿನ ಎಲ್ಲಾ ಜನಪ್ರತಿನಿಧಿಗಳು ತಕ್ಷಣದ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಇನ್ನು ಕರಾವಳಿ ಭಾಗದಲ್ಲಿ ಕೇಂದ್ರ ಅಧ್ಯಯನ ತಂಡ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಪ್ರಕೃತಿ ವಿಕೋಪ ವಾದಾಗ ಇಷ್ಟು ತ್ವರಿತವಾಗಿ ನೆರೆ ಅಧ್ಯಯನಾಗುತ್ತಿರುವುದೇ ಮೊದಲ ಬಾರಿಗೆ. ಮಳೆ ಹಾನಿ ಸಮೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರದ ನಾಲ್ಕು ತಂಡಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದೆ. ಒಂದು ತಂಡ ಕರಾವಳಿಯಲ್ಲಿ ಪ್ರವಾಸ ಮಾಡಿ ಸಮೀಕ್ಷೆ ನಡೆಸಿದೆ. ಬೇಳೆ ಹಾನಿ, ಕೃಷಿ ಚಟುವಟಿಕೆಗಳ ಹಾನಿ ಮತ್ತು ಮೂಲ ಭೂತ ಸೌಕರ್ಯದಲ್ಲಿ ಉಂಟಾಗಿರುವ ಹಾನಿಗಳ ಬಗ್ಗೆ ಸಮೀಕ್ಷೆ ಮಾಡಿವೆ. ರಾಜ್ಯ ಸರಕಾರದ ವಿನಂತಿಯ ಮೇರೆಗೆ ಕೇಂದ್ರದ ತಂಡ ತಕ್ಷಣ ಬಂದಿದೆ. ಅವರು ಮೂಲಭೂತ ಸೌಕರ್ಯ ಮತ್ತು ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ. ತಂಡ ಸಮೀಕ್ಷೆ ಬಳಿಕ ವರದಿ ಸಲ್ಲಿಸಲಿದ್ದು ಹೆಚ್ಚಿನ ಅನುದಾನ ದೊರಕಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ದೊಡ್ಡಬಳ್ಳಾಪುರ ಜನಸ್ಪಂದನ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ರಾಜ್ಯ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ 1 ವರ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಹಾಗೂ ಆ ಮೂಲಕ ಜನರ ಸ್ಪಂದನೆಯನ್ನು ಕೇಳಿ ಇನ್ನಷ್ಟು ಹೊಸ ವಿಷಯಗಳನ್ನು , ಹೊಸ ಆಲೋಚನೆಗಳನ್ನು ಮಾಡುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇದನ್ನು ಮೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ಯಶಸ್ಸು ಹಾಗೂ ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದೆ ಈ ಕಾರ್ಯಕ್ರಮವನ್ನು ರಾಜ್ಯದ್ಯಂತ ವಿಸ್ತರಿಸುತ್ತೇವೆ ಎಂದು ತಿಳಿಸಿದರು.