ಮಲ್ಪೆ ಮೀನುಗಾರಿಕಾ ಬೋಟ್ ಮುಳುಗಡೆ- 7 ಮಂದಿ ಮೀನುಗಾರರ ರಕ್ಷಣೆ
ಮಲ್ಪೆ ಸೆ.10: ಗಂಗೊಳ್ಳಿ ತೀರದಿಂದ ಸುಮಾರು 15 ಮಾರು ಆಳ ದೂರದಲ್ಲಿ ಮುಳುಗಡೆಗೊಂಡಿದ್ದ ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಲತೀಶ್ ಮೆಂಡನ್ ಅವರಿಗೆ ಸೇರಿದ ಶ್ರೀದುರ್ಗಾ ವೈಷ್ಣವಿ ಬೋಟು ಆ.29 ರಂದು ರಾತ್ರಿ ಮಲ್ಪೆ ಬಂದರಿನಿಂದ ಹೊರಟಿತ್ತು. ಮೀನುಗಾರಿಕೆ ಮುಗಿಸಿ ಸೆ.8 ರಂದು ವಾಪಸು ಬರುವಾಗ ಬೆಳಗ್ಗೆ ಗಂಗೊಳ್ಳಿ ತೀರದಿಂದ ಸುಮಾರು 15 ಮಾರು ಆಳ ದೂರ ಬೋಟಿನ ಕೆಳಭಾಗಕ್ಕೆ ಗಟ್ಟಿಯಾದ ವಸ್ತುತಾಗಿದ ಪರಿಣಾಮ ಬೋಟ್ ನ ಒಳಗಡೆ ನೀರು ಬರಲಾರಂಭಿಸಿತ್ತು. ಈ ವೇಳೆ ಬೋಟಿನಲ್ಲಿದ್ದ ಕಾರ್ಮಿಕರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ನೀರಿನ ಒಳ ಹರಿವು ಹೆಚ್ಚಾಗಿ ಬೋಟ್‍ನ ಎಂಜಿನ್ ಕೆಟ್ಟು ಹೋಗಿ ಬೋಟು ಮುಳುಗಡೆಗೊಂಡಿತು.
ಈ ಸಂದರ್ಭದಲ್ಲಿ ಪಕ್ಕದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸ್ವರ್ಣಮಂಗಳ, ಸಮೃದ್ಧಿ, ಸಮುದ್ರತನಯ ಬೋಟ್ ನವರು ತತ್‍ಕ್ಷಣ ಧಾವಿಸಿ ಬಂದು ಬೋಟ್‍ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. 3 ಬೋಟ್‍ನ ಸಹಾಯದಿಂದ ಎಳೆದು ತರುವಾಗ ಸಂಜೆ ಹಂಗಾರಕಟ್ಟೆ ಬೆಂಗ್ರೆ ಸಮೀಪ ಬೋಟು ಸಂಪೂರ್ಣ ಮುಳುಗಡೆಂಡಿತ್ತು. ಘಟನೆಯಿಂದ ಹಿಡಿದ ಮೀನು, ಬಲೆ, ಎಂಜಿನ್ ಸಹಿತ ಸುಮಾರು 50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.