ಉಪ್ಪೂರು ಗ್ರಾಮದ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ- ನ್ಯಾ.ಶಾಂತವೀರ ಶಿವಪ್ಪ
ಉಡುಪಿ, ಸೆ.9: ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾದಿಕಾರ ಹಾಗೂ ಜಿಲ್ಲಾಡಳಿತದ ಮೂಲಕ ಪರಿಹಾರ ಒದಗಿಸುವ ಮತ್ತು ಕಾನೂನು ಅರಿವು ಮತ್ತು ನೆರವು ನೀಡುವ ಕಾರ್ಯಕ್ರಮವನ್ನು ಸೆಪ್ಟಂಬರ್ 10 ರಂದು ಬೆಳಗ್ಗೆ 10.30 ಕ್ಕೆ ಉಪ್ಪೂರು ಜಾತಬೆಟ್ಟುವಿನ ಚಿತ್ತಾರಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.ಅವರು ಇಂದು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಕುಂಠ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಮೂಲಕ 1200 ಮನೆಗಳ ಸಮೀಕ್ಷೆ ನಡೆಸಿ, ಗ್ರಾಮಸ್ಥರ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಈ ಸಮಸ್ಯೆಗಳಲ್ಲಿ ಸ್ಥಳದಲ್ಲೇ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸೆ.10 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಮೂಲಕ ಪರಿಹಾರ ಒದಗಿಸಲಾಗುವುದು ಮತ್ತು ಉಳಿದ ಸಮಸ್ಯೆಗಳ ವಿವರಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಕಾಲಮಿತಿಯಲ್ಲಿ ಅವುಗಳಿಗೆ ಪರಿಹಾರ ಒದಗಿಸುವಂತೆ ತಿಳಿಸಲಾಗುವುದು ಹಾಗೂ ಈ ಬಗ್ಗೆ ಆದ ಪ್ರಗತಿಯ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಿಯಮಿತವಾಗಿ ಪರಿಶೀಲಿಸಲಾಗುವುದು ಎಂದರು.
ಕಾರ್ಯಕ್ರಮ ನಡೆಯುವ ದಿನದಂದು ವಿವಿಧ ಇಲಾಖೆಗಳವತಿಯಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆದು ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜೊತೆಗೆ ಯೋಜನೆಯ ನೆರವು ಪಡೆಯಲು ಅಗತ್ಯವಿರುವ ಅರ್ಜಿಗಳನ್ನು ನೀಡುವುದರ ಜೊತೆಗೆ ಸೂಕ್ತ ದಾಖಲಾತಿಗಳಿದ್ದಲ್ಲಿ ಸ್ಥಳದಲ್ಲಿಯೇ ಸೌಲಭ್ಯಗಳಿಗೆ ಮಂಜೂರಾತಿಯನ್ನು ನೀಡಲಾಗುವುದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋಟ್ ್ ನ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ವೀರಪ್ಪ ಭಾಗವಹಿಸಲಿದ್ದಾರೆ ಎಂದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿ ಮಂಜೂರಾತಿ, ವಿಕಲಚೇತನ ಸೌಲಭ್ಯ,ಕಂದಾಯ ಸಮಸ್ಯೆಗಳು ಮತ್ತು ರಸ್ತೆ ಸಮಸ್ಯೆಯ ಬಗ್ಗೆ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ ಎಂದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ. ಪ್ರೊ.ನಿರ್ಮಲಾ ಕುಮಾರಿ ಮಾತನಾಡಿ, ತಮ್ಮ ಕಾಲೇಜಿನ 172 ವಿದ್ಯಾರ್ಥಿಗಳು 17 ಗುಂಪುಗಳಾಗಿ ವಿಂಗಡನೆಗೊಂಡು 2 ದಿನಗಳಿಂದ ಉಪ್ಪೂರು ಗ್ರಾಮ ವ್ಯಾಪ್ತಿಯ 1200ಮನೆಗಳ ಈ ಸಮೀಕ್ಷೆಯನ್ನು ಮಾಡಿದ್ದಾರೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ವಕೀಲರ ಸಂಘಧ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್, ನಾಗರಂಜನ್ ಉಪಸ್ಥಿತರಿದ್ದರು.