‘ಭಾರತ್ ಜೋಡೋ’ ಯಾತ್ರೆಯಲ್ಲ ದೇಶ ವಿಭಜನೆಯ ಪ್ರಾಯಶ್ಚಿತ್ತ ಯಾತ್ರೆ- ಕುಯಿಲಾಡಿ
ಉಡುಪಿ: ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷ ತನ್ನದೇ ಸಾಧನೆ ಎಂಬಂತೆ ಬಿಂಬಿಸುವ ಪ್ರಯತ್ನದ ಮೂಲಕ ಸ್ವಾತಂತ್ರ್ಯ ಯೋಧರನ್ನು ಅವಮಾನಿಸುವುದು ಹಾಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರಗೈಯುವುದು ಕಾಂಗ್ರೆಸ್ ನ ‘ಭಾರತ್ ಜೋಡೋ’ ಯಾತ್ರೆಯ ಮೂಲ ಉದ್ದೇಶವಾಗಿದೆ. ಕಾಂಗ್ರೆಸ್ ನ ಅನೇಕ ಹಿರಿಯ ಮುಖಂಡರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ವೈಫಲ್ಯದ ಗುಣಗಾನಗೈದು ಕಾಂಗ್ರೆಸ್ಸನ್ನು ಅವ್ಯಾಹತವಾಗಿ ತೊರೆಯುತ್ತಿರುವ ಸಂದಿಗ್ಧ ಸನ್ನಿವೇಶದಲ್ಲಿ ಗೊಂದಲದ ಗೂಡಾಗಿರುವ ಕಾಂಗ್ರೆಸ್ ಇದೀಗ ನಡೆಸುತ್ತಿರುವುದು ದೇಶ ವಿಭಜನೆಗೈದ ಪಾಪದ ‘ಪ್ರಾಯಶ್ಚಿತ್ತ ಯಾತ್ರೆ’ ವಿನಹ ಭಾರತವನ್ನು ಜೋಡಿಸುವ ಯಾತ್ರೆಯಲ್ಲ. ಕಾಂಗ್ರೆಸ್ ನ ‘ಭಾರತ್ ಜೋಡೋ’ ಯಾತ್ರೆಯಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲದೇ ಇದ್ದರೂ ಕಾಂಗ್ರೆಸ್ ಮುಖಂಡರ ‘ಕಾಂಗ್ರೆಸ್ ಚೋಡೋ’ ಅಭಿಯಾನಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಕಾಂಗ್ರೆಸ್ ಕೇವಲ ಒಂದೇ ಕುಟುಂಬದ ಹಿತವನ್ನು ಬಯಸಿ, ವಿಭಜನೆ ರಾಜಕೀಯದಲ್ಲೇ ತೊಡಗಿಸಿಕೊಂಡಿದ್ದು ಇತಿಹಾಸ. ನೆಹರೂ ಅಧಿಕಾರದ ಹಪಾಹಪಿಯ ಫಲವಾಗಿ 1947ರಲ್ಲಿ ಅಖಂಡ ಭಾರತ ವಿಭಜನೆಗೊಂಡಿತು. ಅಂದು ನಡೆದ ಅಸಂಖ್ಯಾತ ಹಿಂದೂಗಳ ಮಾರಣಹೋಮ, ಅತ್ಯಾಚಾರ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದಿಂದ ಕಾಶ್ಮೀರಿ ಪಂಡಿತರ ನರಮೇಧ, ಸ್ವಾತಂತ್ರ್ಯಾನಂತರ ಸುದೀರ್ಘ ಅವಧಿಗೆ ಕಾಂಗ್ರೆಸ್ ನ ದುರಾಡಳಿತ, ಬ್ರಹ್ಮಾಂಡ ಬ್ರಷ್ಟಾಚಾರ, ಒಂದೇ ವರ್ಗದ ಓಲೈಕೆ ಇವೆಲ್ಲವನ್ನೂ ಕಾಂಗ್ರೆಸ್ ವರಿಷ್ಠರು ಮತ್ತು ಕಾಂಗ್ರೆಸ್ ಮುಖಂಡರು ಮೆಲುಕು ಹಾಕಲು ಇದು ಸಕಾಲವಾಗಿದೆ.
ಇಂದು ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಸಂಘಟಿತವಾಗಿ ಸುಭದ್ರವಾಗಿ ಸಮೃದ್ಧವಾಗಿದೆ. ಆದರೂ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಯಾತ್ರೆ ಯಾವ ಪುರುಷಾರ್ಥ ಸಾಧನೆಗಾಗಿ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದೇಶದೆಲ್ಲೆಡೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣದಲ್ಲಿ ಇ.ಡಿ. ವಿಚಾರಣೆಯನ್ನು ಎದುರಿಸಿರುವುದು ಜಗಜ್ಜಾಹೀರಾಗಿದೆ. ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಬೆರಳ ತುದಿಯಲ್ಲೇ ಕಾಂಗ್ರೆಸ್ ನ ಹಗರಣಗಳ ಸರಮಾಲೆಯನ್ನು ಸುಲಲಿತವಾಗಿ ಅರಿತುಕೊಂಡಿದ್ದಾರೆ. ವಿಶ್ವ ನಾಯಕರೆನಿಸಿದ ಪ್ರಧಾನಿ ನರೇಂದ್ರ ಮೋದಿಯವರ ಶ್ರೇಷ್ಠ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ. ಇವೆಲ್ಲವನ್ನೂ ಅರಗಿಸಿಕೊಳ್ಳಲಾಗದ ಭ್ರಷ್ಟ ಕಾಂಗ್ರೆಸ್ ದೇಶವಾಸಿಗಳ ಗಮನವನ್ನು ಬೇರೆಡೆಗೆ ಒಯ್ಯಲು ನಿಷ್ರಯೋಜಕ ಭಾರತ್ ಜೋಡೋ ಯಾತ್ರೆ ಎಂಬ ಹೊಸ ನಾಟಕವನ್ನಾಡುತ್ತಿರುವುದು ಜನಜನಿತವಾಗಿದೆ.
ರಾಷ್ಟ್ರ ಧ್ವಜವನ್ನು ಮರೆತ ಕಾಂಗ್ರೆಸಿಗರಿಗೆ ಪ್ರಧಾನಿ ಮೋದಿ ‘ಹರ್ ಘರ್ ತಿರಂಗಾ’ ಎಂಬ ಕರೆ ನೀಡಿದಾಗ ರಾಷ್ಟ್ರ ಧ್ವಜದ ನೆನಪಾಗುತ್ತದೆ. ದೇಶದೆಲ್ಲೆಡೆ ಅಶಾಂತಿಯ ವಾತಾವರಣ ಸೃಷ್ಟಿಸುತ್ತಾ ದೇಶ ವಿರೋಧಿ ಕೃರ್ತ್ಯಗಳಿಗೆ ಬೆಂಬಲಿಸುವ ಕಾಂಗ್ರೆಸಿಗರು ಚುನಾವಣೆ ಸಮೀಪಿಸುತ್ತಿದ್ದಂತೆ ದೇಶವನ್ನು ಜೋಡಿಸುವ ಕನಸು ಕಾಣುತ್ತಾರೆ. ದೇಶವಾಸಿಗಳು ಪ್ರಬುದ್ಧರಾಗಿದ್ದು ಕಾಂಗ್ರೆಸ್ ನ ಸಮಯಸಾಧಕ ಕೃತ್ಯಗಳನ್ನು ಸೂಕ್ಮವಾಗಿ ಗಮನಿಸುತ್ತಿದ್ದಾರೆ. ಅಖಂಡ ಭಾರತವನ್ನು ತುಂಡರಿಸಿದ ಕಾಂಗ್ರೆಸ್ಸಿಗೆ ಭಾರತವನ್ನು ಜೋಡಿಸುವ ಬಗ್ಗೆ ಸೊಲ್ಲೆತ್ತುವ ನೈತಿಕತೆಯೂ ಇಲ್ಲ, ಸಂಘಟಿತ ಭಾರತವನ್ನು ಪುನರ್ ಜೋಡಿಸಲು ಸಾಧ್ಯವೂ ಇಲ್ಲ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.