ಕಾಪು: ಪಾದಚಾರಿಗೆ ಬೈಕ್ ಡಿಕ್ಕಿ- ಸವಾರ ಮೃತ್ಯು
ಕಾಪು ಸೆ.9(ಉಡುಪಿ ಟೈಮ್ಸ್ ವರದಿ): ತಾಲೂಕಿನ ಮೂಳೂರು ಬೊಬ್ಬರ್ಯ ದೈವಸ್ಥಾನದ ಸಮೀಪ ಅಜಾಗರುಕತೆಯಿಂದ ಬೈಕ್ ಚಲಾಯಿಸಿದ ಪರಿಣಾಮ ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಬೈಕ್ ಸಮೇತ ರಸ್ತೆಗೆ ಬಿದ್ದ ಸವಾರ ಮೃತಪಟ್ಟ ಘಟನೆ ನಡೆದಿದೆ.
ಸುರೇಶ ಎಲ್. ಪುತ್ರನ್ ಮೃತಪಟ್ಟವರು. ಇವರು ಸೆ.8 ರಂದು ತಮ್ಮ ಸ್ನೇಹಿತ ಹರೀಶ ಕೆ. ಸಾಲಿಯಾನ್ ರವರೊಂದಿಗೆ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿಯಿಂದ ಮೂಳೂರು ಕಡೆಗೆ ಹೊರಟಿದ್ದರು. ಈ ವೇಳೆ ರಸ್ತೆಯ ಏಕಮುಖ ಸಂಚಾರ ವಿರುದ್ಧ ದಿಕ್ಕಿನಲ್ಲಿ ಮೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಂಜೆ ವೇಳೆ ಮೂಳೂರು ಬೊಬ್ಬರ್ಯ ದೈವಸ್ಥಾನದ ಸಮೀಪ ಸುರೇಶ ಎಲ್. ಪುತ್ರನ್ ರವರು ಒಮ್ಮೇಲೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈರಣ್ಣ ರವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಈರಣ್ಣ ರವರ ರಸ್ತೆಯ ಬದಿಗೆ ಬಿದ್ದು ಗಾಯಗೊಂಡಿದ್ದರು. ಇದೇ ವೇಳೆ ಬೈಕ್ ಸಮೇತ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದು, ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಸುರೇಶ ಎಲ್. ಪುತ್ರನ್ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹಾಗೂ ಅಪಘಾತದಲ್ಲಿ ಗಾಯಗೊಂಡ ಈರಣ್ಣ ಹಾಗೂ ಹರೀಶ ಕೆ. ಸಾಲಿಯಾನ್ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂಬುದಾಗಿ ಉಚ್ಚಿಲ ಬಡಾ ಗ್ರಾಮದ ನಿವಾಸಿ ಹರೀಶ ಕೆ. ಸಾಲಿಯಾನ್ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.