ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಇನ್ನಿಲ್ಲ

ಲಂಡನ್‌: ಬ್ರಿಟನ್‌ನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾದರು. ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದು.

ಬಂಕಿಂಗ್‌ಹ್ಯಾಮ್‌ ಅರಮನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ರಾಣಿಯ ಗೌರವಾರ್ಥ ಬ್ರಿಟನ್‌ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ದೀರ್ಘಾವಧಿಯ ಬದುಕು ಮತ್ತು ಆಡಳಿತ ಕುರಿತು ಸಂತಾಪದ ಮಾತುಗಳು ಬರುತ್ತಿವೆ.

ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್‌ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆಯು ತಿಳಿಸಿದೆ.

ರಾಣಿಗೆ ನಾಲ್ವರು ಮಕ್ಕಳು. ಹಿರಿಯ ಮಗ, ವೇಲ್ಸ್‌ನ ರಾಜಕುಮಾರ, 73 ವರ್ಷದ ಚಾರ್ಲ್ಸ್‌ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು ಎಂದು ಹೇಳಿದರು.

ಗುರುವಾರ ಸಂಜೆ ರಾಣಿಯ ಆರೋಗ್ಯ ಸ್ವಲ್ಪಮಟ್ಟಿಗೆ ಹದಗೆಟ್ಟಿತ್ತು. ವೈದ್ಯರ ನಿಗಾದಲ್ಲಿಯೇ ಇರಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದರು. ರಾಣಿಯ ಮಕ್ಕಳಾದ ಚಾರ್ಲ್ಸ್‌, ರಾಜಕುಮಾರಿ 72 ವರ್ಷದ ಆ್ಯನೆ, ರಾಜಕುಮಾರರಾದ 62 ವರ್ಷದ ಆಂಡ್ರ್ಯೂ ಮತ್ತು 58 ವರ್ಷದ ಎಡ್ವರ್ಡ್‌ ಅವರು ಬಾಲ್‌ಮೊರಲ್‌ನಲ್ಲಿರುವ ರಾಣಿಯ ಎಸ್ಟೇಟ್‌ಗೆ ಧಾವಿಸಿದರು.

ರಾಣಿಯಾಗಿ ಅವರು ಬುಧವಾರವಷ್ಟೇ ಬ್ರಿಟನ್‌ನ 15ನೇ ಪ್ರಧಾನಿಯಾಗಿ ಲಿಜ್‌ ಟ್ರಸ್‌ ಅವರನ್ನು ನೇಮಕಮಾಡಿದ್ದರು.  

Leave a Reply

Your email address will not be published. Required fields are marked *

error: Content is protected !!