ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆ ಯತ್ನ
ಕುಂದಾಪುರ ಸೆ.8: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿಯೊಬ್ಬ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಸಂಗಮ್ ಸೇತುವೆಯಿಂದ ಪಂಚಗಂಗಾವಳಿ ನದಿಗೆ ಹಾರಿರುವ ಘಟನೆ ಇಂದು ನಡೆದಿದೆ.
ನದಿಗೆ ಹಾರಿರುವ ಯುವಕನನ್ನು ಕುಂದಾಪುರದ ವಡೇರಹೋಬಳಿ ಜೆಎಲ್‍ಬಿ ರಸ್ತೆ ನಿವಾಸಿ ರಘುವೀರ್ ಶೆಟ್ಟಿ ಅವರ ಮಗ ಸಾಯೀಶ್ ಶೆಟ್ಟಿ ಯಾನೆ ನಿಕ್ಕಿ ಎಂದು ಗುರುತಿಸಲಾಗಿದೆ.
ಸಾಯೀಶ್ ಶೆಟ್ಟಿ ಶಿವಮೊಗ್ಗದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ನೀಟ್ ಪರೀಕ್ಷೆ ಬರೆದಿದ್ದ. 630 ಅಂಕ ಪಡೆಯುವ ಭರವಸೆ ಇಟ್ಟುಕೊಂಡಿದ್ದ. ಹಾಗೂ ಅದರ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆದರೆ ಆತ ಪರೀಕ್ಷೆಯಲ್ಲಿ 140 ಅಂಕ ಪಡೆದಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಸೇತುವೆ ಮೇಲೆ ಸೈಕಲ್ ಇಟ್ಟು ನದಿಗೆ ಹಾರಿದ್ದಾನೆ.
ಸಾಯೀಶ್ ಶೆಟ್ಟಿ ಸಂಗಂ ಬ್ರಿಡ್ಜ್ ಬಳಿ ಸೈಕಲ್ಲಿನಲ್ಲಿ ಬಂದಿದ್ದು, ಸೈಕಲ್ ಹಾಗೂ ಮೊಬೈಲನ್ನು ಬ್ರಿಡ್ಜ್ ಪಕ್ಕ ಇಡುತ್ತಿದ್ದಾಗ ಸ್ಥಳೀಯರು ಕೆಲವರು ನೋಡಿದ್ದಾರೆ. ಆದರೆ ಆತ ಏನು ಮಾಡುತ್ತಿದ್ದಾನೆ ಎನ್ನುವುದನ್ನು ಗ್ರಹಿಸುವ ಮೊದಲೇ ಅವರ ಕಣ್ಣೆದುರೇ ನದಿಗೆ ಹಾರಿದ್ದಾನೆ.
ಕುಂದಾಪುರ ಸಂಗಮ್ ಸೇತುವೆ ಮೇಲಿಂದ ಈತ ನದಿಗೆ ಹಾರಿದ್ದನ್ನು ಗಮನಿಸಿದ ವಾಹನ ಸವಾರರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು, ಮುಳುಗು ತಜ್ಞರು ಹಾಗೂ ಸ್ಥಳೀಯರು ವಿದ್ಯಾರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನೀರಿನ ಹರಿವು ಹೆಚ್ಚಿದ್ದು, ನೀರಿನ ಮಟ್ಟವೂ ಹೆಚ್ಚಾಗಿರುವ ಕಾರಣ ಆತನನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.