ಉಡುಪಿ: ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಸರ್ವಧರ್ಮ ಸಭೆ
ಉಡುಪಿ ಸೆ.8 (ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಕಾಂಗ್ರೆಸ್ ನಿರ್ದೇಶನದಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಅಜ್ಜರಕಾಡು ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಸರ್ವಧರ್ಮ ಸಭೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಯವರು ಮಾತನಾಡಿ, ಬಿ.ಜೆ.ಪಿ.ಯ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಮ್ಮ ಜವಾಬ್ದಾರಿಯನ್ನು ಮರೆತು ಜನರಿಗೆ ನಿರಾಶೆ ಹುಟ್ಟಿಸಿದೆ, ಸರಕಾರಕ್ಕೆ ಯಾವುದೇ ಜನಪರ ಕಾಳಜಿ ಇಲ್ಲ. ಈ ಬಗ್ಗೆ ಜನರ ಗಮನ ಸೆಳೆದು ಭಾರತದ ಏಕತೆ ಮತ್ತು ರಾಷ್ಟ್ರಧ್ವಜಕ್ಕಾಗುವ ಅಗೌರವವನ್ನು ತೊಲಗಿಸಲು ಈ ಭಾರತ ಜೋಡೋ ಯಾತ್ರೆ ಕೈಕೊಳ್ಳಲಾಗಿದೆ ಎಂದರು.
ಸಹಕಾರಿ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಅಣ್ಣಯ್ಯ ಸೇರಿಗಾರ್ ರವರು ಮಾತನಾಡಿ, ಯಾವುದೇ ಒಂದು ಪಕ್ಷ ಬೆಳೆಸಲು ಯುವಕರ ಬಲಿದಾನ ಪಡೆಯುವುದು ಸರಿಯಲ್ಲ. ಅಧಿಕಾರಕ್ಕಾಗಿ ಧರ್ಮಗಳನ್ನು ಎತ್ತಿಕಟ್ಟಿ ದೇಶವನ್ನು ಒಡೆಯುವ ಕೆಲಸ ಸರಿಯಲ್ಲ. ಭಾರತೀಯರು ನಾವೆಲ್ಲಾ ಒಂದೇ, ಭಾರತ ಜತ್ಯಾತೀತ ರಾಷ್ಟ್ರವಾಗಿಯೇ ಇರಬೇಕು – ಇದನ್ನು ಒಡೆಯುವ ಕೆಲಸ ಮಾಡುವವರನ್ನು ಕಾಂಗ್ರೆಸ್ ವಿರೋದಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆಶೋಕ್ ಕುಮಾರ್ ಕೊಡವೂರು ಅವರು, ದೇಶದುದ್ದಗಲಕ್ಕೂ 3,750 ಕಿ.ಮಿ. ಚಲಿಸುವ ಈ ಭಾರತ್ ಜೋಡೊಯಾತ್ರೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಿರ್ದೇಶನದಂತೆ ನಾವೂ ಚಾಲನೆ ನೀಡಿದ್ದೇವೆ ಅಲ್ಲದೆ ಮುಂದೆ ಈ ಯಾತ್ರೆ ಕರ್ನಾಟಕವನ್ನು ಪ್ರವೇಶಿಸುವಾಗ ನಾವು ಸೇರಿಕೊಳ್ಳುತ್ತೇವೆ ಎಂದರು.
ಈ ವೇಳೆ ಕ್ರಿಶ್ಚಿಯನ್ ಧರ್ಮದ ಪರವಾಗಿ ಫಾದರ್ ವಿಲಿಯಮ್ ಮಾರ್ಟೀಸ್ ಮತ್ತು ಮುಸ್ಲಿಮ್ ಧರ್ಮದ ಪರವಾಗಿ ಅಂಜುಮಾನ್ ಮಸೀದಿ ಉಡುಪಿ ಇದರ ಪ್ರಮುಖರಾದ ಮೌಲಾನ ಹಿನಾಯತ್ ರುಜ್ವಿಯನ್ ಅವರು ಮಾತನಾಡಿ ಈ ಯಾತ್ರೆ ಭಾರತ ಐಕ್ಯತಾ ಯಾತ್ರೆ ಎಂದೇ ಬಿಂಬಿಸಲ್ಪಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಸ್ವಪ್ನರಾಜ್ ಬಳಗದವರಿಂದ ದೇಶ ಪ್ರೇಮ ಗೀತೆಗಳನ್ನು ಹಾಡಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಎಂ.ಎ.ಗಫೂರ್, ವೆರೋನಿಕಾ ಕರ್ನೇಲಿಯೋ, ದಿನೇಶ್ ಪುತ್ರನ್, ಪ್ರಸಾದ್ ರಾಜ್ ಕಾಂಚನ್, ಹರೀಶ್ ಕಿಣಿ ಅಲೆವೂರು, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಲ್ಕೆಬೈಲ್, ನಾಗೇಶ್ ಕುಮಾರ್ ಉದ್ಯಾವರ, ಗೀತಾ ವಾಗ್ಲೆ, ಕಿಶೋರ್ ಕುಮಾರ್ ಎರ್ಮಾಳ್, ವಿಜಯ ಪೂಜಾರಿ, ಇಸ್ಮಾಯಿಲ್ ಆತ್ರಾಡಿ, ಉಪೇಂದ್ರ ಗಾಣಿಗ, ದಿನೇಶ್, ಜಯಕುಮಾರ್, ಕೆ.ಅಣ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.