ಹಿರಿಯಡ್ಕ: ಸತತ 10 ಘಂಟೆ ಕಾರ್ಯಾಚರಣೆ ಬಳಿಕ ಮನೆಯೊಳಗಿದ್ದ ಚಿರತೆಯ ರಕ್ಷಣೆ
ಹಿರಿಯಡ್ಕ ಸೆ.8: ಇಲ್ಲಿನ ಚಂದ್ರಿಕಾ ರಂಜನ್ ಕೇಳ್ಕರ್ ಎಂಬವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಅವಿತುಕೊಂಡು ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಸೆರೆ ಹಿಡಿಯಾಲಾಗಿದೆ.
ಒಂದೆರಡು ವಿಫಲ ಪ್ರಯತ್ನದ ಬಳಿಕ ಸಂಜೆಯ ವೇಳೆಗೆ ಕೊನೆಗೂ ಚಿರತೆಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳುಯಶಸ್ವಿಯಾದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಮನೆಯೊಳಗೆ ತೆರಳಿ ಮತ್ತೊಮ್ಮೆ ಚುಚ್ಚುಮದ್ದು ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮನೆಯಿಂದ ರಕ್ಷಿಸಲಾಯಿತು. ನಂತರ ಮೊದಲೇ ಸಿದ್ಧಪಡಿಸಿದ್ದ ಬೋನಿನೊಳಗೆ ಚಿರತೆಯನ್ನು ಹಾಕಿ ಕೊಂಡೊಯ್ಯಲಾಯಿತು.
ಸುಮಾರು ಮೂರು ವರ್ಷ ಪ್ರಾಯದ ಈ ಗಂಡು ಚಿರತೆಗೆ ಮೈತುಂಬಾ ಗಾಯಗಳಾಗಿವೆ. ಐದಾರು ದಿನಗಳ ಮುಂಚೆ ಈ ಮನೆಯೊಳಗೆ ಚಿರತೆ ನುಗ್ಗಿರುವ ಸಾಧ್ಯತೆ ಇದ್ದು, ಸರಿಯಾದ ಆಹಾರ ಸಿಗದೇ ಕಂಗಾಲಾಗಿತ್ತು. ಅದೃಷ್ಟವಶಾತ್ ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಇದೀಗ ಸೆರೆ ಹಿಡಿದಿರುವ ಚಿರತೆಗೆ ಚಿಕಿತ್ಸೆಯನ್ನು ನೀಡಿ ನಂತರ ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ತಯಾರಿ ನಡೆಸಿದ್ದಾರೆ.
ಸೆ.6 ರಂದು ಮನೆಯೊಳಗೆ ಚಿರತೆ ಇರುವುದನ್ನು ಗಮನಿಸಿದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅವರ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಬಳಿಕ ಸತತ 10 ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ರಾಜಿ ಮ್ಯಾಥ್ಯೂ, ಸುನೀಶ್ ಬಾಬು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು