ಪ್ರಯಾಣಿಕನಿಗೆ ಕಾಲಿನಿಂದ ಒದ್ದ ಬಸ್ ನಿರ್ವಾಹಕ ಅಮಾನತು
ಪುತ್ತೂರು ಸೆ.8: ಇಲ್ಲಿನ ಈಶ್ವರಮಂಗಲದಲ್ಲಿ ಬಸ್ಸ್ ಹತ್ತಲು ಮುಂದಾದ ಪಾನಮತ್ತ ಎಂದು ಹೇಳಲಾದ ಪ್ರಯಾಣಿಕೋರ್ವನಿಗೆ ಹಲ್ಲೆ ನಡೆಸಿ ಕಾಲಿನಿಂದ ದೂಡಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರಕಟನೆ ಮೂಲಕ ಮಾಹಿತಿ ನೀಡಿರುವ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಬಸ್ಸಿನ ನಿರ್ವಾಹಕನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದ್ದು ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹಾಗೂ ನಿಗಮದ ಚಾಲನಾ ಸಿಬ್ಬಂದಿಗಳಿಗೆ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರಂತರ ತರಬೇತಿ ಹಾಗೂ ತಿಳುವಳಿಕೆ ನೀಡಿದ್ದರೂ ಈ ರೀತಿಯ ಘಟನೆ ನಡೆದಿರುವುದು ದುಃಖದ ಸಂಗತಿ. ಸಿಬ್ಬಂದಿಗಳಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಿ ಪ್ರಯಾಣಿಕರೊಡನೆ ಸೌಜನ್ಯವಾಗಿ ವರ್ತಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು, ಇದರ ಜೊತೆಗೆ ಈ ರೀತಿಯ ಘಟನೆಗಳಿಗೆ ಕಾರಣರಾಗುವ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಿನ್ನೆ ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ ಎಂಬವರು ಪದಡ್ಕಕ್ಕೆ ಹೋಗಲು ಬಸ್ಸನ್ನು ಹತ್ತಿದ್ದು, ಮದ್ಯಪಾನ ಮಾಡಿದ್ದಾನೆ ಎಂದು ಬಸ್ ನಿರ್ವಾಹಕ ಕೃಷ್ಣಪ್ಪರನ್ನು ಕೈಯಿಂದ ದೂಡಿ, ಹಲ್ಲೆ ನಡೆಸಿ ಕಾಲಿನಿಂದ ಒದ್ದಿರುವುದರಿಂದ ಪ್ರಯಾಣಿಕ ಕೃಷ್ಣಪ್ಪ ಕೆಳಗೆ ರಸ್ತೆಗೆ ಬಿದ್ದಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿದ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೃತ್ಯಕ್ಕೆ ಕಾರಣರಾದ ಬಸ್ ನಿರ್ವಾಹಕನನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಇದೀಗ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.