ಉಡುಪಿ: ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಪ್ರಕರಣ- ಆರೋಪಿಗೆ ಜೀವಾವಧಿ ಶಿಕ್ಷೆ
ಉಡುಪಿ: ಮೂಡುಸಗ್ರಿ ರೈಲ್ವೆ ಹಳಿಯ ಸಮೀಪದ ಹಾಡಿಯಲ್ಲಿ ಮೂರು ವರ್ಷದ ಹಿಂದೆ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಬಾಗಲಕೋಟೆ ಜಿಲ್ಲಾ ಬಾದಾಮಿ ತಾಲೂಕಿನ ಹನುಮಂತ ಬಸಪ್ಪ ಕಂಬಳಿ (42)ಗೆ ಜೀವಿತಾವಾಧಿ ಕಾರಾಗೃಹ ಶಿಕ್ಷೆ ಸಹಿತ ಇತರೆ ಪ್ರಕರಣಗಳಿಗೂ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿ ಹನುಮಂತ ಮೇಲಿನ ಆರೋಪ ಸಾಬೀತಾಗಿರುವುದರಿಂದ ನ್ಯಾಯಾಧೀಶ ಶ್ರಿನಿವಾಸ ಸುವರ್ಣ, ಆರೋಪಿಯನ್ನು ದೋಷಿ ಎಂಬುದಾಗಿ ಸೆ.5ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿದರು.
ಆರೋಪಿಗೆ ಐಪಿಸಿ ಕಲಂ 302 ಅಡಿಯಲ್ಲಿ ಜೀವಿತಾವಧಿ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ, ಪೋಕ್ಸೋ ಕಾಯ್ದೆಯಡಿ ಬರುವ ಅಪ್ರಾಪ್ತಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ, ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ 10 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, ಸಾಕ್ಷ್ಯನಾಶದಡಿ 7 ವರ್ಷ ಜೈಲು ಹಾಗೂ 2 ಸಾವಿರ ರೂ. ದಂಡ ವಿಧಿಸಿದ್ದು ದಂಡ ಪಾವತಿ ಮಾಡಲು ತಪ್ಪಿದಲ್ಲಿ ಒಂದು ವರ್ಷ ಕಠಿನ ಸಜೆ ವಿಧಿಸಿ ಆದೇಶಿಸಿದ್ದಾರೆ. ದಂಡದ 32 ಸಾವಿರ ರೂ. ಮೊತ್ತದಲ್ಲಿ 7 ಸಾವಿರ ರೂ. ಸರಕಾರಕ್ಕೆ, 25 ಸಾವಿರ ರೂ. ಮೊತ್ತ ಮೃತ ಬಾಲಕಿ ಕುಟುಂಬಕ್ಕೆ ಹಾಗೂ ಸರಕಾರದಿಂದ ಬಾಲಕಿ ಪೋಷಕರಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯದ ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು. ಉಡುಪಿಯ ಅಂಗಡಿಯೊಂದರಲ್ಲಿ ಬಾಲಕಿ ಕೆಲಸ ಮಾಡಿಕೊಂಡಿದ್ದು, ಹನುಮಂತ 2019ರ ಮಾ.9ರಂದು ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಅಪಹರಿಸಿ, ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದನು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.