ಮಂಗಳೂರು: ಏರ್‍ಲಿಫ್ಟ್ ಮಾಡಬೇಕೆಂದು ನಂಬಿಸಿ 3 ಲಕ್ಷ ರೂ ಉದ್ಯಮಿಗೆ ವಂಚನೆ
ಉಡುಪಿ ಸೆ.7(ಉಡುಪಿ ಟೈಮ್ಸ್ ವರದಿ): ಯೂರೋ ಬಾಂಡ್ ಕಂಪೆನಿಯ ಮಾಲೀಕನೆಂದು ಹೇಳಿಕೊಂಡು ಅಪಘಾತವಾಗಿರುವ ತನ್ನ ಮಗನನ್ನು ಗೋವಾದಿಂದ ಮಂಗಳೂರಿಗೆ ಏರ್‍ಲಿಫ್ಟ್ ಮಾಡಲು ಹಣ ಬೇಕು ಎಂದು ನಂಬಿಸಿ 3 ಲಕ್ಷ ರೂ.ಪಡೆದು ಉದ್ಯಮಿಯೊಬ್ಬರಿಗೆ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವ್ಯವಹಾರ ಮಾಡಿಕೊಂಡಿರುವ ಮಂದಾರ್ತಿಯ ಹೆಗ್ಗುಂಜೆ ಗ್ರಾಮದ ಉದ್ಯಮಿ ಪ್ರಮೋದ್ ಕುಮಾರ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ, ಪ್ರಮೋದ್ ಶೆಟ್ಟಿ ಅವರಿಗೆ ಸೆ.4 ರಂದು ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಾನು ರಾಜೇಶ್ ಶಾ, ಯೂರೋ ಬಾಂಡ್ ಕಂಪನಿಯ ಮಾಲೀಕನೆಂದು ಹೇಳಿಕೊಂಡಿದ್ದಾನೆ. ಹಾಗೂ ತನ್ನ ಮಗನಿಗೆ ಕಾರವಾರ – ಗೋವಾ ಮಾರ್ಗದ ನಡುವೆ ರಸ್ತೆ ಅಪಘಾತವಾಗಿದ್ದು, ಆತನನ್ನು ಏರ್ ಲಿಫ್ಟ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ತುರ್ತಾಗಿ ರೂ.3,00,000 ಹಣ ಬೇಕಾಗಿರುವುದರಿಂದ ತನ್ನ ಬ್ಯಾಂಕ್ ಕಾತೆಗೆ ಹಣ ವರ್ಗಾಯಿಸುವಂತೆ ಕೇಳಿಕೊಂಡಿದ್ದಾನೆ. ಇದನ್ನು ನಂಬಿದ ಪ್ರಮೋದ್ ಶೆಟ್ಟಿ ಅವರು ತನ್ನ ಹಣದ ಜೊತೆಗೆ ಗೆಳೆಯರಿಂದ ಹಣ ಸಂಗ್ರಹಿಸಿ ಒಟ್ಟು ರೂ. 3,00,000 ಹಣವನ್ನು ಗೂಗಲ್ ಪೇ ಮುಖೇನಾ ವ್ಯಕ್ತಿ ತಿಳಿಸಿರುವ ಖಾತೆಗೆ ವರ್ಗಾಯಿಸಿದ್ದರು. ಆದರೆ ಆ ಬಳಿಕ ತಾನು ಮೋಸ ಹೋದ ವಿಚಾರ ತಿಳಿದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.