| ಉಡುಪಿ ಸೆ.7 (ಉಡುಪಿ ಟೈಮ್ಸ್ ವರದಿ): ಹೆಂಡತಿ ಹೆಸರಲ್ಲಿ ಮಾಡಿದ ಸಾಲವನ್ನು ತೀರಿಸದೆ ಅದರಿಂದ ಪಾರಾಗಲು ಹೆಂಡತಿಯೊಂದಿಗೆ ಆತ್ಮಹತ್ಯೆ ನಾಟಕವಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಪತಿ ಹಾಗೂ ಆತನ ಮನೆಯವರ ವಿರುದ್ಧ ಮೃತ ಮಹಿಳೆಯ ಅಕ್ಕ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾ (29) ಮೃತಪಟ್ಟ ಮಹಿಳೆ, ವಿದ್ಯಾ ಅವರು ಬಡಾ ಗ್ರಾಮದ ಮುಳ್ಳುಗುಡ್ಡೆ ವಾಸಿ ಯತಿನ್ ರಾಜ್ ಎಂಬಾತನನ್ನು ಪ್ರೀತಿಸಿ 2017 ರ ಫೆ.28 ರಂದು ವಿವಾಹವಾಗಿದ್ದರು. ಗಂಡನ ಮನೆಯಲ್ಲಿ ಯತಿನ್ ರಾಜ್, ಮಾವ ರಾಘು, ಅತ್ತೆ ಗೀತಾ ಮತ್ತು ಮೈದುನ ಯಕ್ಷಿತ್ ಎಂಬವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಹಾಗೂ ಯತಿನ್ ರಾಜ್ ನು ಸರಿಯಾಗಿ ಕೆಲಸ ಮಾಡದೇ ವಿದ್ಯಾಳಿಂದ ಹಲವು ಬ್ಯಾಂಕ್, ಸೊಸೈಟಿ, ಸಂಘ, ಸಂಸ್ಥೆಗಳಿಂದ ಸಾಲ ತೆಗೆಸಿ ಅದನ್ನು ಖರ್ಚು ಮಾಡುತ್ತಿದ್ದನು. ಮಾತ್ರವಲ್ಲದೆ ವಿದ್ಯಾ ಅವರ ತಂದೆ ಕೊಟ್ಟ ಹಣವನ್ನೂ ಖರ್ಚು ಮಾಡಿ, ಚಿನ್ನವನ್ನು ಮಾರಾಟ ಮಾಡಿ ಖರ್ಚು ಮಾಡಿರುತ್ತಾನೆ. ಇದರ ಜೊತೆಗೆ ಇನ್ನೂ ಹೆಚ್ಚಿನ ಸಾಲ ತೆಗೆದುಕೊಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಾ ದೈಹಿಕ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಹಾಗೂ ಸೆ.1 ರಂದು ಸಂಜೆ ಮುಳ್ಳುಗುಡ್ಡೆಯ ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಮಯಕ್ಕೆ ವಿದ್ಯಾ ಮತ್ತು ಯತಿನ್ ಅಲ್ಲಿಗೆ ಹೋಗಿರುತ್ತಾರೆ. ಬಳಿಕ ತಾವಿಬ್ಬರೂ ವಿಷ ಸೇವಿಸಿರುವುದಾಗಿ ಯತಿನನ್ನು ಪಕ್ಕದ ಮನೆಯವರ ಬಳಿ ತಿಳಿಸಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಯತಿನನು ಸಹಜವಾಗೇ ಇದ್ದು, ವಿದ್ಯಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದರಂತೆ ಇನ್ನು ಮುಂದಕ್ಕೆ ಸಾಲ ಮಾಡಿಕೊಡುವುದಿಲ್ಲ ಎಂದು ವಿದ್ಯಾ ಹೇಳಿದ್ದರಿಂದ ವಿದ್ಯಾರನ್ನು ಕೊಂದರೆ ಅವರಿಂದ ಮಾಡಿಸಿದ ಸಾಲ ತೀರುತ್ತದೆ ಎಂಬ ಕಾರಣಕ್ಕೆ ಯತಿನನು ಯೋಜನೆ ರೂಪಿಸಿ ಇಬ್ಬರೂ ವಿಷ ಸೇವಿಸಿ ಸಾಯೋಣವೆಂದು ಪತ್ನಿಯನ್ನು ನಂಬಿಸಿ ಅವಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಷ ಕುಡಿಸಿದ್ದಾನೆ. ಬಳಿಕ ತನ್ನ ಮೇಲೆ ಅನುಮಾನ ಬರಬಾರದೆಂದು ತಾನೂ ಸ್ವಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ನಾಟಕ ಮಾಡುತ್ತಿದ್ದು, ವಿದ್ಯಾಳ ಸಾವಿಗೆ ಅವಳ ಗಂಡ, ಅತ್ತೆ, ಮಾವ, ಮೈದುನ ಕಾರಣರಾಗಿರುತ್ತಾರೆ ಎಂಬುದಾಗಿ ಮೃತರ ಅಕ್ಕ ಲೀಲಾವತಿ ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |