ಕುಂದಾಪುರ: ಅಂಪಾರುವಿನಲ್ಲಿ ಮೃತದೇಹ ಪತ್ತೆ ಪ್ರಕರಣ- ಕುತ್ತಿಗೆ ಹಿಚುಕಿ ಸ್ನೇಹಿತರಿಂದಲೇ ಹತ್ಯೆ!
ಶಂಕರನಾರಾಯಣ ಸೆ.7(ಉಡುಪಿ ಟೈಮ್ಸ್ ವರದಿ): ಐದು ತಿಂಗಳ ಹಿಂದೆ ಕುಂದಾಪುರದ ಅಂಪಾರುವಿನ ಹಡಾಳಿಯ ವರಾಹಿ ಹೊಳೆಯಲ್ಲಿ ವಿನಯ ಪೂಜಾರಿ ಎಂಬವರ ಮೃತದೇಹ ಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಇದೀಗ ಪತ್ತೆಯದ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ವಿನಯ ಪೂಜಾರಿ ಅವರ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅವರ ಸಾವು ಕೊಲೆ ಎಂದು ಸಾಬೀತಾಗಿದೆ. ವಿನಯ ಪೂಜಾರಿ ಅವರು ತಮ್ಮ ಸ್ನೇಹಿತನಾದ ಹುಣ್ಸೆಕಟ್ಟೆ ಹೊಸ ತೊಪ್ಪಲುವಿನ ವಿಜಯ ಪೂಜಾರಿ ಎಂಬುವವರ ಮಗ ಅಕ್ಷಯ ಎಂಬಾತನೊಂದಿಗೆ ತಿರುಗಾಡಿಕೊಂಡಿದ್ದು, ಆತನು ಮೇ.28 ರಂದು ಮನೆಯಲ್ಲಿ ಇದ್ದ ವಿನಯ ಪೂಜಾರಿಯವರನ್ನು ಕರೆದುಕೊಂಡು ಹೋಗಿದ್ದ. ಅದರಂತೆ ಮೃತ ವಿನಯ ಪೂಜಾರಿ ಅವರನ್ನು ಅಕ್ಷಯ ಹಾಗೂ ಆತನ ಸ್ನೇಹಿತರು ಸೇರಿ ಕುತ್ತಿಗೆ ಹಿಚುಕಿ ಕೊಲೆ ಮಾಡಿರುವುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮೃತರ ಅಕ್ಕ ಜಯಶ್ರೀ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೇ.28ರಂದು ವಿನಯ ಪೂಜಾರಿ ಅವರು ಹಂಗಳೂರು ಗ್ರಾಮದ ಚೌಕುಡಿಬೆಟ್ಟು ನೆರಂಬಳ್ಳಿ ಎಂಬಲ್ಲಿ ಮನೆಯಿಂದ ಕಾಣೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬಳಿಕ ಎ.4 ರಂದು ಕುಂದಾಪುರದ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿನ ವರಾಹಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವಿನಯ ಪೂಜಾರಿ ಅವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದೂದರಿಂದ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಮೃತದೇಹದ ಕೈ ಮೇಲೆ ಇದ್ದ ಕಿಚ್ಚ ಸುದೀಪ್ ಎಂದು ಇಂಗ್ಲೀಷನಲ್ಲಿ ಬರೆದಿರುವ ಹಚ್ಚೆ ಹಾಗೂ ಮುಖ ಚಹರೆ ಮೂಲಕ ಅದು ವಿನಯ ಪೂಜಾರಿ ಅವರದ್ದೇ ಮೃತದೇಹ ಎಂದು ಸಂಬಂಧಿಕರು ಗುರುತಿಸಿದ್ದರು. ಮಾತ್ರವಲ್ಲದೆ ಈ ಬಗ್ಗೆ ಮೃತರ ಮಾವ ಶೀನ ಪೂಜಾರಿ ಎಂಬವರು ವಿನಯ ಅವರ ಮರಣದ ಬಗ್ಗೆ ಸಂಶಯ ಇರುವುದಾಗಿ ಎ.4 ರಂದು ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ನಡುವೆ ವಿನಯ ಪೂಜಾರಿ ಅವರ ಸಾವಿನ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಮರಣೋತ್ತರ ಪರೀಕ್ಷಾ ವರದಿ ಬಂದಿರುವುದಿಲ್ಲ. ಇದೀಗ ಸೆ.6 ರಂದು ವಿಚಾರಿಸಿದಾಗ ವಿನಯ ಪೂಜಾರಿ ಅವರನ್ನು ಕುತ್ತಿಗೆ ಹಿಚುಕಿ ಕೊಲೆಗೈದಿರುವುದು ವೈದ್ಯರ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.