ಲಾಕ್ ಡೌನ್ ಭಾರತದ ಯಶಸ್ಸು: ರಾಹುಲ್ ಗೆ ಬಿಜೆಪಿ ತಿರುಗೇಟು

ನವದೆಹಲಿ: ಲಾಕ್ ಡೌನ್ ಮಾಡಿಯೂ ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ ವಿಫಲವಾದ ಏಕೈಕ ರಾಷ್ಟ್ರ ಭಾರತ ಎಂದು ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. 

ಲಾಕ್ ಡೌನ್ ಭಾರತದ ವೈಫಲ್ಯವಲ್ಲ, ಭಾರತದ ಯಶಸ್ಸು ಎಂದು ಹೇಳಿರುವ ಬಿಜೆಪಿ, ಲಾಕ್ ಡೌನ್ ಜಾರಿಗೊಳಿಸುವುದಕ್ಕೂ ಮುನ್ನ ಭಾರತದಲ್ಲಿ ಕೊರೋನಾ ವೈರಸ್ ಪ್ರಸರಣ ಪ್ರಮಾಣ 3 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಆದರೆ ಲಾಕ್ ಡೌನ್ ಜಾರಿಗೊಳಿಸಿದ ಬಳಿಕ 13 ದಿನಗಳಿಗೆ ದ್ವಿಗುಣಗೊಂಡಿದೆ ಎಂದು ಹೇಳಿದೆ.

ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಮೋದಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಲು ಕೈಗೊಂಡ ನಿರ್ಧಾರದಿಂದಾಗಿ ಭಾರತ ಅಮೆರಿಕ, ಫ್ರಾನ್ಸ್, ಸ್ಪೇನ್ ಮಾದರಿಯಲ್ಲಿ ಕೊರೋನಾದಿಂದ ಹೆಚ್ಚು ಅಪಾಯಕ್ಕೆ ಸಿಲುಕಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 

ದೇಶ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿರುವ ಪ್ರಕಾಶ್ ಜಾವ್ಡೇಕರ್, ಕೊರೋನ ವೈರಸ್ ಹರಡುವಿಕೆ ತಡೆಗೆ ಭಾರತ ಕೈಗೊಂಡ ಕ್ರಮಗಳ ಬಗ್ಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಆದರೆ ಕಾಂಗ್ರೆಸ್ ಮಾತ್ರ ಮೋದಿ ಸರ್ಕಾರದ ಕ್ರಮಗಳನ್ನು ವಿರೋಧಿಸುತ್ತಿದೆ ಎಂದಿದ್ದಾರೆ. 

ಲಾಕ್ ಡೌನ್ ಸಡಿಲಿಕೆಗಿಂತಲೂ ಮುನ್ನ ಲಾಕ್ ಡೌನ್ ಜಾರಿಯನ್ನು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ಈಗ ಲಾಕ್ ಡೌನ್ ಸಡಿಲಿಕೆಯನ್ನೂ ಪ್ರಶ್ನಿಸುತ್ತಿದೆ, ಇದು ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿ ಎಂದು ಜಾವ್ಡೇಕರ್ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 45 ಲಕ್ಷ ವಲಸಿಗ ಕಾರ್ಮಿಕರನ್ನು ತಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿರುವುದು ಐತಿಹಾಸಿಕ ಕ್ರಮ ಎಂದು ಜಾವ್ಡೇಕರ್ ತಿಳಿಸಿದ್ದಾರೆ. ಇದೇ ವೇಳೆ ಬಡವರಿಗೆ ಆರ್ಥಿಕ ನೆರವು ನೀಡಬೇಕೆಂಬ ರಾಹುಲ್ ಗಾಂಧಿ ಬೇಡಿಕೆಗೆ ಪ್ರತಿಕ್ರಿಯೆ ನೀಡಿರುವ ಜಾವ್ಡೇಕರ್, ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳು ವಲಸಿಗ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿದೆ, ಕಾಂಗ್ರೆಸ್ ಆಡಳಿತದಲ್ಲಿರುವ ಯಾವ ರಾಜ್ಯಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗಿದೆ ಎಂದು ಜಾವ್ಡೇಕರ್ ಪ್ರಶ್ನಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!