ಉಡುಪಿ-ದಕ ಜಿಲ್ಲೆಯ ಮಕ್ಕಳಿಗೆ “ಹಾಡು ನೀ ಹಾಡು” ಕಾರ್ಯಕ್ರಮ

ಉಡುಪಿ ಸೆ.7(ಉಡುಪಿ ಟೈಮ್ಸ್ ವರದಿ): ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ ಪುಟಾಣಿ ಹಾಡುಗಾರರಿಗಾಗಿ ನೂತನ “ಹಾಡು ನೀ ಹಾಡು”  ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಮಣಿಪಾಲ ಇದರ ಕೋರ್ ಕಮಿಟಿ ಸದಸ್ಯೆಯಾದ ಸರಿತಾ ಸಂತೋಷ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ವೇದಿಕೆಯ ಜೊತೆಗೆ ಅವಕಾಶಗಳ ಮಹಾಪೂರವನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ರಿಜಿಸ್ಟ್ರೇಷನ್ ಪ್ರಾರಂಭವಾಗಿದೆ. ಜೊತೆಗೆ ಆಡಿಷನ್ ಸ್ಥಳದಲ್ಲಿಯೂ ಕೂಡ ನೋಂದಣಿ ಮಾಡಬಹುದಾಗಿದೆ. ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, 5 ರಿಂದ 10 ನೇ ತರಗತಿ ಮಕ್ಕಳಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವು ವಿ4 ಚಾನೆಲ್ ಮೂಲಕ ಪ್ರತಿ ಶನಿವಾರ-ಭಾನುವಾರ ನಿಮ್ಮೆಲ್ಲರ ಮನೆ ಮನಗಳನ್ನ ತಲುಪಲಿದೆ. ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ಹಾಡುಗಾರರಿಗೆ ಜಿಲ್ಲೆಯ ಹೆಸರಾಂತ ಸಂಗೀತ ಪ್ರವೀಣರಿಂದ ಮಾರ್ಗದರ್ಶನ ಜೊತೆಗೆ ಯಶಸ್ಸಿನ ಹಾದಿಯಲ್ಲಿ ಕೈ ಹಿಡಿದು ನಡೆಸುವ ಪ್ರಯತ್ನ ಇದಾಗಿದೆ. ಆರು ತಿಂಗಳುಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಉಡುಗೊರೆ ಜೊತೆಗೆ ಜಿಲ್ಲೆಯ ಹೆಸರಾಂತ ಗಾಯಕರು, ನಟ-ನಟಿಯರನ್ನ ಭೇಟಿ ಮಾಡುವ, ಮಾತನಾಡುವ ಅವಕಾಶವೂ ದೊರೆಯಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಆಡಿಷನ್ ಗಳು ಸೆ.11 ರಂದು ಬೆಳಿಗ್ಗೆ 8 ಗಂಟೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಮತ್ತು ಕುಂದಾಪುರದ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಹಾಗೂ ಸೆ.18 ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಕೊಡಿಯಾಲ್‍ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ, ಮೂಡಿಬಿದ್ರಿಯ ಆಲ್ವಾಸ್ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ, ಮತ್ತು ಪುತ್ತೂರಿನ ಸೈಂಟ್ ವಿಕ್ಟೋರ್ಸ್ ಗಲ್ರ್ಸ್ ಹೈಸ್ಕೂಲ್ ನಲ್ಲಿ ನಡೆಯಲಿದೆ. ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಂಬಲವಿರುವ ಮಕ್ಕಳಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳ ಬೇಕೆಂದು ಅವರು ತಿಳಿಸಿದರು. ಹಾಗೂ ಈ ಆಡಿಷನ್ ನಲ್ಲಿ ಭಗವಹಿಸುವವರಿಗೆ ನಿಯಮಗಳಿದ್ದು, ಶೃತಿ ಪೆಟ್ಟಿಗೆ, ತಾಳ, ಲಯ, ಕರೋಕೆ ಇತ್ಯಾದಿ ಸಂಗೀತ ಪರಿಕರಗಳನ್ನ ಬಳಸುವಂತಿಲ್ಲ. ಭಾವಗೀತೆ, ಜಾನಪದ ಗೀತೆ, ಸಿನಿಮಾ ಹಾಡು ಇತ್ಯಾದಿ ಯಾವುದೇ ಕನ್ನಡ ಹಾಡನ್ನು ಹಾಡಬಹುದು.  ಭಾಗವಹಿಸುವ ಮಗುವು ಐದರಿಂದ 10ನೇ ತರಗತಿ ವಿದ್ಯಾರ್ಥಿಯಾಗಿರಬೇಕು. ಉಡುಪಿ ಮತ್ತು ದಕ ಜಿಲ್ಲೆಯ ನಿವಾಸಿಯಾಗಿರಬೇಕು ಹಾಗೂ ಎಂದು ಸ್ಪರ್ಧಾಳುಗಳು ಒಂದು ಬಾರಿ ಮಾತ್ರ ಕಾರ್ಯಕ್ರಮಕ್ಕೆ ರಿಜಿಸ್ಟರ್ ಮಾಡತಕ್ಕದ್ದು. ಈ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9108560215 ಸಂಪರ್ಕಿಸುವಂತೆ ತಿಳಿಸಿದರು.  

ಇನ್ನು ನಿಸ್ವಾರ್ಥ ಸಮಾಜ ಸೇವೆಗಳನ್ನ ಮಾಡುತ್ತ ಸಮಾಜದಲ್ಲಿ ತನ್ನದೇ ಆದ ಘನತೆಯನ್ನ ಹೊಂದಿರುವ ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಶನ್, ಕ್ಯಾನ್ಸರ್ ನಿಂದ ಬಳಲುತ್ತಿರುವ ಪುಟಾಣಿಗಳ ಚಿಕಿತ್ಸೆಗಾಗಿ ನೆರವಾಗಲು ಉಚಿತ ಸೂರಿನ ವ್ಯವಸ್ಥೆ,  ಅನಾಥ ವೃದ್ಧರಿಗೆ  ಊಟ ಹಾಗು ಹಣಕಾಸಿನ ನೆರವು, ಅನಾಥ ಮಕ್ಕಳಿಗೆ ಉನ್ನತ ಶಿಕ್ಷಣದ ಸೌಲಭ್ಯ,  ಹೊರಪ್ರದೇಶ ಕೂಲಿ ಕಾರ್ಮಿಕರ ಮಕ್ಕಳಿಗೆ ಮೂಲಭೂತ  ಸೌಕರ್ಯದ ವ್ಯವಸ್ಥೆ ಹಾಗೂ ಶಿಕ್ಷಣದ ಜವಾಬ್ದಾರಿ ಇತ್ಯಾದಿ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತ ಬಂದಿದೆ. ಈ ಕಾರ್ಯಗಳ ಪಟ್ಟಿಯಲ್ಲಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗಾಗಿ ಆಯೋಜಿಸಿರುವ ” ಹಾಡು ನೀ ಹಾಡು” ಕಾರ್ಯಕ್ರಮವು ಒಂದಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಇವರಿಂದ ದೊರೆತಿರುವ  ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಣಿಪಾಲದ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಲ.ಸುರೇಶ್ ಪ್ರಭು , ಸದಸ್ಯರಾದ ಕೃಪಾ ಪ್ರಶೀದ್, ಜಯಂತ್ ಐತಾಳ್, ಸುಹಾಸ್ ಕೌಶಿಕ್, ಗೌತಮ್ ತಲ್ವಾಲ್ಕರ್, ಸೌಜನ್ಯ ವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!