ಸೋಲಿನ ಮೂಲಕವೇ ಗೆಲುವಿನ ಮೆಟ್ಟಿಲು- ಮಿಸ್ ಇಂಡಿಯಾ ಯುನಿವರ್ಸ್ ವಿಜೇತೆ ದಿವಿತಾ ರೈ
ಮಂಗಳೂರು: ಸೋಲಿನ ಮೂಲಕವೇ ಗೆಲುವಿನ ಮೆಟ್ಟಿಲು ಸುಲಭವಾಗುತ್ತದೆ. ನಾನು ಕೂಡ ಬಹಳಷ್ಟು ಸ್ಪರ್ಧೆಗಳಲ್ಲಿ ಸೋಲು ಕಂಡಿದ್ದೇನೆ. ಆದರೆ ಸೋಲಿಗೆ ಹೆದರಿ ನನ್ನ ಕನಸನ್ನು ಸಾಕಾರ ಮಾಡುವ ಬಗ್ಗೆಯೇ ಯೋಚಿಸುತ್ತಿದ್ದೆ. ಇದರ ಪರಿಣಾಮವೇ ಇಂದಿನ ಫಲಿತಾಂಶ ಎನ್ನುತ್ತಾರೆ ಮಿಸ್ ಇಂಡಿಯಾ ಯುನಿವರ್ಸ್ – 2022 ಆಗಿ ಆಯ್ಕೆಗೊಂಡ ಮಂಗಳೂರು ಮೂಲದ ದಿವಿತಾ ರೈ.
ಮಿಸ್ ಯಿನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವಿತಾ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್ ನ ಗೀತಾ ಎಸ್. ಎಂ ಶೆಟ್ಟಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಹುಟ್ಟೂರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸೋಲು ಸಾಮಾನ್ಯ. ಇದಕ್ಕಾಗಿ ಭಯ ಬೇಡ. ಹಿಂದೆ ಸರಿಯಲೂ ಬಾರದು. ಕನಸುಗಳ ಸಾಕಾರಕ್ಕಾಗಿ ಧೈರ್ಯದಿಂದ ಮುನ್ನುಗ್ಗುವ ಹಾಗೂ ವಿಶ್ವಾಸದಿಂದ ಗುರಿ ಮುಟ್ಟುವ ಮನೋಭಾವ ಬೇಕು. ಬಂಟರ ಸಮಾಜ ಹೋರಾಟದ ಮನೋಭಾವವನ್ನು ಮೈಗೂಡಿಸಿದೆ, ಇದೇ ಸಮುದಾಯದಲ್ಲಿ ಹುಟ್ಟಿದ ನಾನು ಕೂಡ ಉತ್ಸಾಹದಿಂದ ಮುಂದಿನ ಸ್ಪರ್ಧೆಗಳನ್ನು ಎದುರಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, 170 ದೇಶಗಳು ಪಾಲ್ಗೊಳ್ಳುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ದಿವಿಕಾ ರೈ ಅವರಿಗೆ ಹುಟ್ಟೂರಿನ ಸಮ್ಮಾನ ಮಹತ್ವವಾದುದು ಎಂದರು.
ದಿವಿಕಾ ರೈ ಅವರ ತಂದೆ ದಿಲೀಪ್ ರೈ ಮಾತನಾಡಿ, ಹೆತ್ತವರು ಮಕ್ಕಳಿಗೆ ಸಂಸ್ಕಾರ, ಮೌಲ್ಯದ ಜತೆಯಲ್ಲಿ ಶಿಕ್ಷಣ ನೀಡುವ ಕಾರ್ಯ ಮಾಡಬೇಕು. ಮಕ್ಕಳು ಯಾವ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶ ನೀಡಬೇಕು, ಆಗ ಖಂಡಿತ ಯಶಸ್ಸು ಸಾಧ್ಯ ಎಂದರು. ದಿವಿಕಾ ರೈ ಅವರ ತಾಯಿ ಪವಿತ್ರಾ ರೈ ಮಾತನಾಡಿ, ಮಗಳ ಸಾಧನೆಗೆ ಸಮಾಜ ಗುರುತಿಸಿರುವುದಕ್ಕೆ ಅಭಾರಿಯಾಗಿದ್ದೇವೆ ಎಂದರು.
ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಖಜಾಂಚಿ ಕೃಷ್ಣ ಪ್ರಸಾದ್ ರೈ, ದಿವಿತಾ ರೈ ಸಹೋದರ ದೈವಿಕ್ ರೈ, ಶ್ರೀರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತೋತ್ಸವ ಸಮಿತಿಯ ಸಂಚಾಲಕಿ ಶಾಲಿನಿ ಶೆಟ್ಟಿ, ಕೋಶಾಧಿಕಾರಿ ಸವಿತಾ ಚೌಟ, ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸಬಿತಾ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ಘಟಕದ ಮಾಜಿ ಸಂಚಾಲಕಿ ಡಾ. ಆಶಾ ಜ್ಯೋತಿ ರೈ ಪ್ರಸ್ತಾವನೆಗೈದರು, ನವೀನ್ ಶೆಟ್ಟಿ ಎಡ್ಮೆಮಾರ್, ಅಕ್ಷತಾ ನವೀನ್ ಶೆಟ್ಟಿ, ಮಂಜುಳಾ ಶೆಟ್ಟಿ ಹಾಗೂ ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.