ಬಾಲ್ಯದಲ್ಲಿ ಸಂಸ್ಕಾರ ಕಲಿಸಿ- ಡಾ.ವಿಜಯ ಬಲ್ಲಾಳ್
ಉಡುಪಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಕಲಿಸಿ, ನಮ್ಮ ಪರಂಪರೆಯ ಬಗ್ಗ ಜ್ಞಾನ ನೀಡಿ ಎಂದು ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಾಲಯದ ಧರ್ಮದರ್ಶೀಗಳಾದ ಡಾ.ನಿ.ಬಿ ವಿಜಯ ಬಲ್ಲಾಳ ಅವರು ಹೇಳಿದರು.
ಅವರು ದೇವಾಲಯದ ಭವಾನಿ ಮಂಟಪದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸರ್ವರ ಸಹಕಾರದೊಂದಿಗೆ ನಡೆಸಿದ ಕರ್ನಾಟಕ ಮಕ್ಕಳ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಉತ್ತಮ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ, ಶೇಖರ ಅಜೆಕಾರು ಅವರು ಯಾರು ಏನೇ ಹೇಳಿದರೂ ಅವರ ಆದಿಗ್ರಾಮೋತ್ಸವ, ಬೆಳದಿಂಗಳ ಸಮ್ಮೇಳನ, ಕವಿ ಸಮ್ಮಿಲನ, ಮಕ್ಕಳ ಮೇಳಗಳನ್ನು ತಮ್ಮ ಮಿತಿಯರಿತು ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಅವರ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಹೇಳಿದರು.
ಮಕ್ಕಳಿಗೆ ಬಾಲ್ಯದಲ್ಲಿಯೆ ಅವರ ಪ್ರತಿಭೆಗೆ ತಕ್ಕ ಅವಕಾಶ ದೊರೆತರೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುವುದು ಸಾಧ್ಯ. ನನ್ನಂತ ನೂರಾರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಡಾ.ಶೇಖರ ಅಜೆಕಾರು ಅವರಂತಹ ಹಿರಿಯರು ಪ್ರೋತ್ಸಾಹಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಬಹುಮುಖ ಪ್ರತಿಭೆ ಅದ್ವಿಕಾ ಶೆಟ್ಟಿ ಹೇಳಿದರು.
ಪ್ರಧಾನ ಮಂತ್ರಿ ಬಾಲಪುರಸ್ಕಾರ ಪಡೆದ ರೆಮೊನಾ ಇವೆಟ್ ಪಿರೇರಾ, ವಿಶ್ವ ದಾಖಲೆಯ ಯೋಗ ಪಟು ತನುಶ್ರೀ ಪಿತ್ರೋಡಿ, ತುಳುನಾಡ ಗಾನ ಕೋಗಿಲೆ ತನುಶ್ರೀ ಮಂಗಳೂರು, ಯುವ ವಾಗ್ಮಿ ಭಕ್ತಿಶ್ರೀ ಆಚಾರ್ಯ ಬೆಳುವಾಯಿ, ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಗೌರವದ ಶೃಜನ್ಯ ಜೆ.ಕೆ ಬೆಳುವಾಯಿ, ಸ್ಯಾಕ್ಸೋ ಫೋನ್ ಸಾಧಕ ಪ್ರೀತಮ್ ದೇವಾಡಿಗ ಮುದ್ರಾಡಿ, ಉದಯೋನ್ಮುಖ ಬರಹಗಾರ್ತಿ ತೃಷಾ ಎಸ್ ಕೋಟ, ವೈಷ್ಣವಿ ಅಡಿಗ ಅತಿಥಿಗಳಾಗಿದ್ದರು.
ವೇದಿಕೆಗೆ ಆಯ್ಕೆಯಾದ ಬಾಲಪ್ರತಿಭೆಗಳನ್ನು ಕಂಪ್ಯೂಟರ್ ತಜ್ಞ ಕೆ.ಪಿ.ರಾವ್, ವಿಶ್ವನಾಥ ಶೆಣೈ ರಾಜ್ಯಮಟ್ಟದ ಪ್ರಶಸ್ತಿಯೊಂದಿಗೆ ಗೌರವಿಸಿದರು. ಶಿಕ್ಷಣ ಕ್ಷೇತ್ರದ ಅನನ್ಯ ಸಾಧಕರಾದ ಎ.ವಿ ಕುಳಮರ್ವ ಮತ್ತು ಲಲಿತಾಲಕ್ಷ್ಮೀ ಕುಳಮರ್ವ ಅವರನ್ನು ಮಕ್ಕಳು ಸನ್ಮಾನಿಸಿದ್ದು ವಿಶೇಷವಾಗಿತ್ತು. ಸಾಮಾಜಿಕ ಕಾರ್ಯಕರ್ತೆ ಸುಣೀತಾ ಆಂಡಾರು, ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಪ್ರಶಾಂತ್ ಕಾಮತ್, ಶಿಕ್ಷಣ ತಜ್ಞ ಎ.ನರಸಿಂಹ, ವಾಸಂತಿ ಅಂಬಲಪಾಡಿ ವಿಶೇಷ ಆಹ್ವಾನಿತರಾಗಿದ್ದರು.ರೂಪಾ ವಸುಂಧರಾ ಆಚಾರ್ಯ ಅವರ ಪುಷ್ಟಾಂಜಲಿ ಚಿತ್ರ ಪ್ರದರ್ಶನವಿತ್ತು.
ಡ್ರಾಮಾ ಜುನಿಯರ್‍ಸ್ ಸೀಸನ್ -4 ರಲ್ಲಿ ಮೊದಲ ಮೂರು ಸ್ಥಾನ ಪಡೆದ ಸಮೃದ್ಧಿ ಕುಂದಾಪುರ, ಸಾನಿಧ್ಯ ಪೆರ್ಡೂರು, ವೇದಿಕ್ ಕೌಶಲ್ ಕಡಬ ಅವರ ಪ್ರದರ್ಶನವಿತ್ತು. ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘಟಕ ಡಾ.ಶೇಖರ ಅಜೆಕಾರು ಸ್ವಾಗತಿಸಿದರು. ಭಕ್ತಿಶ್ರೀ ಮತ್ತು ರೇಶ್ಮಾ ಶೆಟ್ಟಿ ಕಾಐಕ್ರಮ ನಿರೂಪಿಸಿದರು. ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಎಸ್. ಅಜೆಕಾರು ವಂದಿಸಿದರು. ಬಾಲ ಪ್ರತಿಭೆಗಳನ್ನು ದೇವಾಲಯದಿಂದ ವಾದ್ಯ ವೃಂದದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.