ಧಾರ್ಮಿಕ ಸಂಪ್ರದಾಯ, ಆಚರಿಸುವ ಹಕ್ಕು ಇದೆ, ಅದನ್ನು ಶಾಲೆಗೆ ಕೊಂಡು ಹೋಗುವ ಅಗತ್ಯವೇನಿದೆ ಸುಪ್ರೀಂ

ನವದೆಹಲಿ ಸೆ.6: ಒಬ್ಬ ವ್ಯಕ್ತಿಗೆ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ, ಆಚರಿಸುವ ಹಕ್ಕು ಇದೆ, ಆದರೆ ಸಮವಸ್ತ್ರ ಧರಿಸುವ ಶಾಲೆಯವರೆಗೆ ಅದನ್ನು ತೆಗೆದುಕೊಂಡು ಹೋಗುವ ಅಗತ್ಯವೇನಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ನಿಯಮವನ್ನು ಪುರಸ್ಕರಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಮವಸ್ತ್ರ ಧರಿಸುವ ಶಾಲೆಯಲ್ಲಿ ಹಿಜಾಬ್ ಏಕೆ ಎಂದು ಪ್ರಶ್ನಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ನ್ಯಾಯಪೀಠವು, ನಿಮ್ಮ ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಹಕ್ಕು ನಿಮಗಿದೆ. ಆದರೆ ನೀವು ಧರಿಸಬೇಕಾದ ಉಡುಪಿನ ಭಾಗವಾಗಿ ಸಮವಸ್ತ್ರವನ್ನು ಹೊಂದಿರುವ ಶಾಲೆಗೆ ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ತೆಗೆದುಕೊಂಡು ಹೋಗಬಹುದೇ ಎಂಬುದು ಪ್ರಶ್ನೆ ಎಂದು ಕೆಲವು ಅರ್ಜಿದಾರರ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರಿಗೆ ಪ್ರಶ್ನೆ ಕೇಳಿದೆ.

ರಾಜ್ಯವು ಶಾಲಾ-ಕಾಲೇಜುಗಳಿಗೆ ನಿಯಮಗಳನ್ನು ರೂಪಿಸುವ ವಿಷಯಗಳಲ್ಲಿ ಡ್ರೆಸ್ ಕೋಡ್ ಇಲ್ಲ ಎಂಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ವಾದವನ್ನು ಪರಿಗಣಿಸಿದ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದರೆ ವಿದ್ಯಾರ್ಥಿಗಳು ಮಿಡಿ-ಮಿನಿಸ್ಕರ್ಟ್‍ಗಳಲ್ಲಿ ಬರಬಹುದೇ ಎಂದು ಕೇಳಿತು.

ಹಾಗೂ ನಿರ್ದಿಷ್ಟ ಅಧಿಕಾರವಿಲ್ಲದಿದ್ದರೆ, 161 ನೇ ವಿಧಿ ಅನ್ವಯವಾಗುತ್ತದೆ, ಸಮವಸ್ತ್ರವನ್ನು ಸೂಚಿಸುವ ಅಧಿಕಾರವಿಲ್ಲದಿದ್ದರೆ, ಹುಡುಗಿಯರು ಮಿಡಿ ಮಿನಿಸ್ಕರ್ಟ್‍ಗಳು ಏನು ಬೇಕಾದರೂ ಬರಬಹುದೇ ಯಾವುದೇ ನಿಯಮಗಳು ಜಾರಿಯಿಲ್ಲದಿದ್ದರೆ, ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವು ಕಾರ್ಯರೂಪಕ್ಕೆ ಬರುತ್ತದೆ. ಹೈಕೋರ್ಟ್ ಹೇಳಿದ್ದನ್ನು ನಾವು ಪಾಲಿಸಬೇಕಾಗಿಲ್ಲ. ಕಾಯ್ದೆಯು ಯಾವುದೇ ಡ್ರೆಸ್ ಕೋಡ್ ನ್ನು ನಿಷೇಧಿಸದಿದ್ದರೆ ಅಥವಾ ಸೂಚಿಸದಿದ್ದರೆ, ರಾಜ್ಯ ಸರ್ಕಾರದ ಕಾರ್ಯನಿರ್ವಾಹಕ ಅಧಿಕಾರ ಬರುತ್ತದೆಯೇ ಅಥವಾ ಇಲ್ಲವೇ ಎಂದು ನ್ಯಾಯಪೀಠ ಕೇಳಿತು.

Leave a Reply

Your email address will not be published. Required fields are marked *

error: Content is protected !!