ಆತ್ರಾಡಿ ರಸ್ತೆ ನಿರ್ಮಾಣಕ್ಕೆ ಅಡ್ಡಿ- ದಂಪತಿಗಳ ವಿರುದ್ಧ ಪ್ರತಿದೂರು
ಉಡುಪಿ:(ಉಡುಪಿ ಟೈಮ್ಸ್ ವರದಿ) ಗ್ರಾಮ ಪಂಚಾಯತ್ ವತಿಯಿಂದ ಅನುದಾನ ಮಂಜುರಗಿದ್ದ ರಸ್ತೆ ನಿರ್ಮಾಣಕ್ಕೆ ತಡೆ ನೀಡಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಆತ್ರಾಡಿಯ ಪರೀಕಾದಲ್ಲಿ ನಡೆದಿದೆ.
ಈ ಬಗ್ಗೆ ಆತ್ರಾಡಿಯ ಪರೀಕಾದಲ್ಲಿ ಚಂದ್ರಹಾಸ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ನೆರೆಮನೆಯವರೊಂದಿಗೆ ತಮ್ಮ ಮನೆಯ ಮುಂಭಾಗದಲ್ಲಿ ರಸ್ತೆಯನ್ನು ನಿರ್ಮಾಣ ಮಾಡುವ ಸಲುವಾಗಿ ಗ್ರಾಮ ಪಂಚಾಯಿಗೆ ಅರ್ಜಿಯನ್ನು ಸಲ್ಲಿಸಿ ರಸ್ತೆಗೆ ಜಾಗವನ್ನು ನೀಡುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡಿದ್ದರು.ಈ ರಸ್ತೆಗೆ ಗ್ರಾಮ ಪಂಚಾಯಿತಿಯಿಂದಲೂ ಅನುದಾನ ಮಂಜೂರಾಗಿತ್ತು. ಸೆ.5 ರಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ನಿರ್ಮಾಣ ಕೆಲಸ ಪ್ರಾರಂಭವಾಗಿದ್ದು, ಸಂಜೆ ವೇಳೆ ಸ್ಥಳಕ್ಕೆ ಬಂದ ನೆರೆಮನೆಯ ಆರತಿ, ಆಕೆಯ ಗಂಡ ಹಾಗೂ ತಮ್ಮ ಅಶೋಕ್ ರವರು ಚಂದ್ರಹಾಸ ಅವರಿಗೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರಾದ ರತ್ನಾಕರ ಶೆಟ್ಟಿರವರ ಜೊತೆಗೆ ಜೊತೆ ಜಗಳ ಮಾಡಿ, ಹೊಡೆದು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಚಂದ್ರ ಹಾಸ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿಯವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.