ಆರೋಗ್ಯ ನಿಧಿ ಯೋಜನೆ ರದ್ದು- ಕೊರಗ ಸಮುದಾಯಕ್ಕೆ ಮಾಡಿದ ದ್ರೋಹ- ಹರೀಶ್ ಕಿಣಿ
ಉಡುಪಿ ಸೆ.6(ಉಡುಪಿ ಟೈಮ್ಸ್ ವರದಿ): ಕೊರಗ ಸಮುದಾಯಕ್ಕೆ ಸರಕಾರದ ವತಿಯಿಂದ ನೀಡಲಾಗುತ್ತಿದ್ದ ಆರೋಗ್ಯ ನಿಧಿ ಯೋಜನೆಯ ರದ್ದು ಆದೇಶವನ್ನು ಹಿಂಪಡೆಯಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾಂಗ್ರೆಸ್ ನಾಯಕ ಅಲೆವೂರು ಹರೀಶ್ ಕಿಣಿ ಅವರು, ಈ ಯೋಜನೆ ರದ್ದು ಪಡಿಸಿರುವ ಆದೇಶ ಅದು ಕೊರಗ ಸಮುದಾಯಕ್ಕೆ ಮಾಡಿದ ದ್ರೋಹವಾಗುತ್ತದೆ. ಈಗಾಗಲೇ ಅಲ್ಪಸಂಖ್ಯಾತರ ಮೇಲೆ ಹಲವು ಅಸಂವಿಧಾನಿಕ ಕ್ರಮ ಕೈಗೊಂಡಿರುವ ಬಿಜೆಪಿ ಸರಕಾರ ಅತೀ ಮುಗ್ದ, ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಜನರಿಗೆ ಗೌರವಯುತವಾಗಿ ಬದುಕಲು ತೊಂದರೆಯೊಡುತ್ತಿದ್ದಾರೆ.
ಅವರ ಆಹಾರ ಕ್ರಮದ ಬಗ್ಗೆ ಈಗಾಗಲೇ ಪರಿವಾರ ಸಂಘಟನೆಗಳ ಮೂಲಕ ತಡೆಹಿಡಿಯುತ್ತಿದ್ದು, ಈಗ ವೈದ್ಯಕೀಯ ನೆರವಿನ ಯೋಜನೆಯನ್ನು ಕಸಿದುಕೊಂಡಿದೆ. ಈ ಬಗ್ಗೆ ಕೂಡಲೇ ಆದೇಶ ಹಿಂಪಡೆದು ನೆರವಾಗಬೇಕು ಹಾಗೂ ಕೊರಗ ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಎಸ್.ಸಿ ಎಸ್‍ಟಿ ಸಮುದಾಯದ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 75 ಯುನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದ ರಾಜ್ಯ ಸರಕಾರ ಅದರ ಬಗ್ಗೆ ದೊಡ್ಡ ಪ್ರಚಾರವನ್ನು ಮಾಡಿತ್ತು. ಆದರೀಗ ಆ ಆದೇಶವನ್ನು ಸರಕಾರ ಹಿಂಪಡೆದಿದೆ. ಹಾಗೂ ಇದರಕ್ಕೆ ಸರಕಾರ ನೀಡುತ್ತಿರುವ ಕಾರಣ ಸ್ವೀಕಾರ ಮಾಡುವಂತಹದ್ದಲ್ಲ. ಈ ಆದೇಶದಿಂದ ಕೂಡಾ ಕೊರಗ ಸಮುದಾಯ ಹಾಗೂ ಪರಿಶಿಷ್ಟ ಜಾತಿಯ ಇತರ ಸಮುದಾಯಗಳಿಗೆ ಬಿಜೆಪಿ ಸರಕಾರ ದ್ರೋಹವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಈ ಎಲ್ಲಾ ಬೆಳವಣಿಗೆಗಳನ್ನು ನೋಡುವಾಗ ಬಿಜೆಪಿ ತನ್ನ ಹಿಡೆನ್ ಅಜೆಂಡಾವನ್ನು ಅನುಷ್ಟಾನ ಗೊಳಿಸಲು ಹೊರಟಂತಿದೆ. ಕೊರಗ ಸಮುದಾಯದ ಈ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ, ಸಾಮಾಜಿಕ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಬರ್ಧದಲ್ಲಿ ಕಾಪು ಬ್ಲಾಕ್ ಉತ್ತರ ವಲಯದ ವಕ್ತಾರ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀ ನಾರಾಯಣ ಪ್ರಭು, ಇಂದ್ರಾಳಿ ಮಂಚಿ ವಾರ್ಡ್‍ನ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ ಸತೀಶ್ ಕುಮಾರ್, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಹಾಗೂ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ಉಪಸ್ಥಿತರಿದ್ದರು.