ವೃತ್ತಿ ಸಂಬಂಧಿ ಸಮಸ್ಯೆ: ದೇಶದಲ್ಲಿ ಪ್ರತಿ ವಾರ 50 ಮಂದಿ ಆತ್ಮಹತ್ಯೆ-ವರದಿಯಲ್ಲಿ ಬಹಿರಂಗ

ಬೆಂಗಳೂರು ಸೆ.5: ದೇಶದಲ್ಲಿ 2021ರಲ್ಲಿ ವೃತ್ತಿ ಸಂಬಂಧಿ ಸಮಸ್ಯೆಗಳಿಂದ ಅಥವಾ ಕಾರ್ಯಕ್ಷೇತ್ರದಲ್ಲಿ ವೃತ್ತಿಪರ ಸಮಸ್ಯೆಗಳಿಂದಾಗಿ ಪ್ರತಿ ವಾರ ಸರಾಸರಿ 50 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆತಂಕಕಾರಿ ಅಂಶ ವರದಿಯಿಂದ ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ಒಂದು ವರ್ಷದ ಅವಧಿಯಲ್ಲಿ ಇಂಥ 480 ಪ್ರಕರಣಗಳು ವರದಿಯಾಗಿವೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೇಶದ ಇಂಥ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಅಸ್ಸಾಂ ಹೀಗೆ ಐದು ರಾಜ್ಯಗಳ ಪಾಲು ಮೂರನೇ ಎರಡರಷ್ಟಿದೆ. ಮಹಾರಾಷ್ಟ್ರ 677 ಪ್ರಕರಣಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಕರ್ನಾಟಕ 480 ಪ್ರಕರಣಗಳನ್ನು ದಾಖಲಿಸಿ ಎರಡನೇ ಸ್ಥಾನದಲ್ಲಿದೆ. ಇತರ ಎಲ್ಲ ರಾಜ್ಯಗಳಲ್ಲಿ ದಾಖಲಾದ ಇಂಥ ಆತ್ಮಹತ್ಯೆ ಪ್ರಕರಣಗಳು 827 ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕಟಗೊಂಡಿರುವ ವರದಿ ಪ್ರಕಾರ,  2020ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 41ರಷ್ಟು ಅಧಿಕ. 2021ರಲ್ಲಿ ವೃತ್ತಿ ಸಂಬಂಧಿ ಸಮಸ್ಯೆಗಳಿಂದ ಒಟ್ಟು 2593 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, 2020ರಲ್ಲಿ ಈ ಸಂಖ್ಯೆ 1837 ಆಗಿತ್ತು ಎನ್ನುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‍ಸಿಆರ್‍ಬಿ) NCRB ಅಂಕಿ ಅಂಶಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಎನ್‍ಸಿಆರ್‍ಬಿ 1999ರಿಂದ ವೃತ್ತಿ ಸಮಸ್ಯೆಗಳ ಪ್ರತ್ಯೇಕ ವರ್ಗವನ್ನು ಆರಂಭಿಸಿದೆ. ಮೊದಲ ವರ್ಷ ಇಂಥ 774 ಪ್ರಕರಣಗಳು ವರದಿಯಾಗಿದ್ದವು.

ಆ ಬಳಿಕ ಈ ಸಮಸ್ಯೆ ಅಲ್ಪಮಟ್ಟಿಗೆ ವ್ಯತ್ಯಯವಾಗುತ್ತಾ ಇದ್ದರೂ, 2021ರವರೆಗೆ ಆತ್ಮಹತ್ಯೆಯ ಸಂಖ್ಯೆ 2000ದ ಗಡಿ ದಾಟಿರಲಿಲ್ಲ. 1999ರಿಂದ 2021ರವರೆಗೆ ವೃತ್ತಿಸಮಸ್ಯೆಗಳಿಂದಾಗಿ ಗರಿಷ್ಠ ಮಂದಿ ಆತ್ಮಹತ್ಯೆಗೆ ಶರಣಾಗಿರುವುದು 2021ರಲ್ಲಿ ಎಂಬುದು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!