ಹೇರೂರು: ಯಾವುದೇ ಕಾರಣಕ್ಕೂ ತ್ಯಾಜ್ಯ ಘಟಕ ಸ್ಥಾಪಿಸಲು ಬಿಡುವುದಿಲ್ಲ- ಗ್ರಾಮಸ್ಥರ ಕರೆ

ಉಡುಪಿ ಸೆ.4: ಹೇರೂರು ಗ್ರಾಮದ ಕಾಡೋಳಿ ಎಂಬಲ್ಲಿ ಹಸಿತ್ಯಾಜ್ಯ ಘಟಕ ಸ್ಥಾಪಿಸುವುದನ್ನು ವಿರೋಧಿಸಿ ಇಂದು ಗ್ರಾಮಸ್ಥರು ಹೇರೂರು ಶಾಲಾ ವಠಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸ್ಥಳೀಯ ರಾಜಕೀಯ ಮುಖಂಡ ಜ್ಞಾನವಸಂತ್ ಶೆಟ್ಟಿ, ಹಸಿತ್ಯಾಜ್ಯ ಘಟಕವನ್ನು ಇಡೀ ಊರಿನ ಜನರು ವಿರೋಧಿಸುತ್ತಾ ಇದ್ದಾರೆ. ಈ ಬಗ್ಗೆ ಸಾಂಕೇತಿಕವಾಗಿ ಸಮಾಲೋಚನೆ ನಡೆಸಿ ಯಾವುದೇ ಕಾರಣಕ್ಕೂ ಇಲ್ಲಿ ಹಸಿತ್ಯಾಜ್ಯ ಘಟಕ ಸ್ಥಾಪಿಸಲು ಬಿಡುವುದಿಲ್ಲ ಎಂದರು. ಹಾಗೂ ಈ ವಿಚಾರದಲ್ಲಿ ಪಂಚಾಯತ್ ಸದಸ್ಯರು ಶಾಸಕರನ್ನು ಮನವರಿಕೆ ಮಾಡಿದ್ದೇವೆ ಎಂದಿದ್ದಾರೆ.

ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಅಧಿಕೃತವಾಗಿ ಇಲ್ಲಿ ಯಾವುದೇ ತ್ಯಾಜ್ಯ ಘಟನೆ ಸ್ಥಾಪನೆ ಆಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಶಾಸಕರು ಬಾಯಿಮಾತಿನಲ್ಲಿ ತಿಳಿಸಿದರೆ ಅದು ಅಧಿಕೃತ ಆಗುವುದಿಲ್ಲ ನಮಗೆ ಶಾಶ್ವತ ಪರಿಹಾರ ಬೇಕಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಮಾತು ತಪ್ಪಿದರೆ ಹೋರಾಟ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡಿದರು.

ಇಲ್ಲಿ ಸ್ಥಾಪಿಸಲು ನಿರ್ಧರಿಸಿರುವ ಹಸಿ ತ್ಯಾಜ್ಯ ಘಟಕವನ್ನು ವಿರೋಧಿಸಿ ಕೋರ್ಟಿಗೂ ಜನರು ಹೊಗಲು ಸಿದ್ದರಿದ್ದು, ಜನರು ಒಟ್ಟು ಸೇರಿ ಶಾಸಕರನ್ನು ಕರೆಸಿ ಅವರಿಗೆ ಸಾಮೂಹಿಕವಾಗಿ ಮನವಿಯನ್ನು ನೀಡಿ ಅವರಿಂದ ಭರವಸೆಯನ್ನು ಪಡೆದುಕೊಂಡು ಅದನ್ನು ಪಂಚಾಯತ್ ಮೂಲಕ ದಾಖಲೆಯಾಗಿ ಅಧಿಕೃತವಾಗಿ ಪಡೆದುಕೊಳ್ಳುವ ಪ್ರಕ್ರಿಯೆಗೆ ಇಲ್ಲಿ ಜನ ಒಟ್ಟಾಗಿದ್ದಾರೆ.

ಒಂದು ವೇಳೆ ಕೃಷಿ ವಿಶ್ವವಿದ್ಯಾಲಯದವರು 11 ಎಕರೆಯನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಡುವುದಾದರೆ ಹೇರೂರಿನ ಗ್ರಾಮಸ್ಥರು ಹೋರಾಟ ಮಾಡಿ ಆ ಜಾಗವನ್ನು ಪಡೆಯುವಂತಹ ಹೋರಾಟ ಮಾಡುವ ಪರಿಸ್ಥಿತಿ ಬರಬಹುದು. ಯಾಕೆಂದರೆ ಅಂದು ಹೇರೂರಿನ ಜನತೆಯೇ ಅದನ್ನು ಕೃಷಿ ಕೇಂದ್ರಕ್ಕೆ ಬಿಟ್ಟುಕೊಟ್ಟದಾದರಿಂದ .ಈಗ ಈ ಜಾಗವನ್ನು ತ್ಯಾಜ್ಯ ಘಟಕ ಕ್ಕೆ ನೀಡಿ ನಮ್ಮನ್ನು ದಾರಿ ಮೇಲೆಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಂತಾರು ಪಂಚಾಯತ್ ಸದಸ್ಯ ಉದಯ್ ಕಾಮತ್ ಮಾತನಾಡಿ ಇಲ್ಲಿ ಸುಮಾರು 4000 ಜನಸಂಖ್ಯೆ ಹೊಂದಿದ್ದು ಈ ಘಟಕ ಸ್ಥಾಪನೆಯಿಂದ ಜನತೆಗೆ ತೊಂದರೆ ಆಗುತ್ತದೆ ಹಾಗೂ ಇಲ್ಲಿ ಇರುವ ನದಿ ನೀರು ಕೂಡಾ ಕಲುಷಿತಗೊಳ್ಳುವ ಸಾಧ್ಯತೆ ಇದ್ದು ಇದರಿಂದ ಅಕ್ಕಪಕ್ಕದ ಗ್ರಾಮಗಳಿಗೂ ಸಮಸ್ಯೆ ಉಂಟಾಗುತ್ತದೆ ಎಂದರು.

ಹಾರಾಡಿ, ಹಂದಾಡಿ, ವಾರಂಬಳ್ಳಿ, ಚಾಂತಾರು ಗ್ರಾಮ ಪಂಚಾಯತ್ ಗಳ ತ್ಯಾಜ್ಯ ಘಟಕ ಬಗ್ಗೆ ಚರ್ಚೆ ನಡೆದಿತ್ತು. ಮುಂದಿನ ದಿನಗಳಲ್ಲಿ ಇಲ್ಲಿ ಅಭಿವೃದ್ಧಿ ಆದಾಗ ಇದೊಂದು ಕೊಳಚೆ ಪ್ರದೇಶ ಆಗುವ ಸಾಧ್ಯತೆಗಳು ಇವೆ. ಅಲ್ಲದೆ ಮುಂದೊಂದು ದಿನ ಮಂಗಳೂರಿನ ಪಚ್ಚನಾಡಿ ಹಾಗೂ ಉಡುಪಿಯ ಕರ್ವಾಲುವಿನಂತೆ ಹೇರೂರು ಕೂಡಾ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸನ್ನ ಕುಮಾರ್ ಶೆಟ್ಟಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಶಾಸಕರಿಗೆ ಅನೇಕ ಸಂದರ್ಭಗಳಲ್ಲಿ ಗೌರವಿಸಿದ್ದೇವೆ. ಇಂದಿನ  ಈ ಸಭೆಗೆ ಶಾಸಕರು ಹಾಜರಿರಬೇಕಿತ್ತು ಆದರೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ಶಾಸಕರಲ್ಲಿ ಕೇಳಿದಾಗ ನಾನು ತಟಸ್ಥನಾಗಿರುತ್ತೇನೆ. ನೀವು ಪ್ರತಿಭಟನೆ ಮಾಡಿ ಹೇಳುತ್ತಾರೆ. ಹಾಗಾದರೆ ಇವರು ನಮ್ಮ ಒಗ್ಗಟ್ಟನ್ನು ಪರೀಕ್ಷಿಸುತ್ತಿದ್ದಾರೆಯೇ ಅಥವಾ ಇಲ್ಲಿನ ಜನರು ಮುಗ್ದರು ಎಂದು ಕೊಂಡಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕರು ಮುಂದೆ ಚುನಾವಣೆಗೆ ಮತ ಕೇಳಲು  ಬಂದಾಗ ನಮ್ಮೂರಿಗೆ ಕಷ್ಟ ಸಮಸ್ಯೆ ಬಂದಾಗ ನೀವು ಎಲ್ಲಿ ಇದ್ದೀರಿ ಎಂದು ಎಲ್ಲರೂ ಕೇಳಬೇಕು ಎಂದು ಹೇಳಿದರು. ಅದಕ್ಕೆ ಸ್ಥಳೀಯ ನಿವಾಸಿಗಳು ಸಹಮತ ವ್ಯಕ್ತಪಡಿಸಿದರು.

ಸಭೆಯಲ್ಲಿ ಸ್ಥಳೀಯ ಮುಖಂಡರಾದ ಸುನೀಲ್ ಸೂಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಅಮೀನ್, ಹೇರೂರು ಮಹಾಲಿಂಗೇಶ್ವರ ದೇವಳದ ಅರ್ಚಕ ಆನಂದ ಭಟ್, ಬಿಜೆಪಿ ಮುಖಂಡ ಸುಪ್ರಸಾದ್ ಶೆಟ್ಟಿ, ಮಾಜಿ ಗ್ರಾಪಂ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಮಧುಸೂದನ್ ಹೇರೂರು, ಹಾರಾಡಿ ಗ್ರಾಪಂ ಸದಸ್ಯ ಕುಮಾರ್ ಬೈಕಾಡಿ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!