‘ಯಕ್ಷ ಛಂದೋಬ್ರಹ್ಮ’ ಎಂದೇ ಖ್ಯಾತರಾದ ಶಿಮಂತೂರು ನಾರಾಯಣಶೆಟ್ಟಿ ನಿಧನ
ಮೂಲ್ಕಿ: ‘ಯಕ್ಷ ಛಂದೋಬ್ರಹ್ಮ’ ಎಂದೇ ಖ್ಯಾತರಾದ ಶಿಮಂತೂರು ನಾರಾಯಣಶೆಟ್ಟಿ (86) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಎಳತ್ತುರು ದಿ. ಅಚ್ಚನ್ನ ಶೆಟ್ಟಿ ಹಾಗೂ ನಂದಳಿಕೆ ಕಮಲಾಕ್ಷಿ ದಂಪತಿಯ ಪುತ್ರರಾದ ಇವರು ಶಾಲಾ ಶಿಕ್ಷಕರಾಗಿ, ವಿದ್ವಾಂಸರಾಗಿ ಬರಹಗಾರರಾಗಿ, ಯಕ್ಷಗಾನ ಪ್ರಸಂಗ ಕರ್ತೃಗಳಾಗಿ ಪ್ರಸಿದ್ಧಿ ಪಡೆದಿದ್ದರು.
ಅವರ ‘ಯಕ್ಷಗಾನ ಛಂದೋಬುಧಿ’ ಕೃತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್ ಪ್ರದಾನ ಮಾಡಿತ್ತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾಗಿರುವ ಅವರು, ತಮ್ಮ 14ರ ಹರೆಯದಲ್ಲೇ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ ರಚಿಸಿದ್ದರು. ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗ್ಗೆ ಅಪಾರ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದಿದ್ದರು.
̧ಐದನೇ ತರಗತಿಯಲ್ಲಿದ್ದಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು. ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋ ನುಶಾಸನಗಳನ್ನು ಅಧ್ಯಯನ ಮಾಡಿದ್ದರು.
ಯಕ್ಷಗಾನ ಕ್ಷೇತ್ರದ ವಿಶಿಷ್ಠ ಸಾಧಕರಿಗೆ ನೀಡುವ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು2013 ರಲ್ಲಿ ನೀಡಿ ಗೌರವಿಸಲಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಗಣೇಶ ಕೊಲೆಕಾಡಿ ಸೇರಿ ನೂರಾರು ಶಿಷ್ಯರನ್ನು ಕಲಾ ಕ್ಷೇತ್ರಕ್ಕೆ ನೀಡಿದ ಹಿರಿಮೆ ಇವರದ್ದು. ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಅಗಲಿದ ದಿವ್ಯ ಚೇತನದ ಸದ್ಗತಿಗಾಗಿ ಪ್ರಾರ್ಥಿಸುತ್ತಾ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ವತಿಯಿಂದ ಸಂತಾಪ ಸೂಚಿಸಿದ್ದಾರೆ.