ಪೊಲೀಸ್ ತನಿಖೆಗೆ ಸಹಕರಿಸದ ಮುರುಘಾ ಶರಣರ ಪುರುಷತ್ವ ಪರೀಕ್ಷೆ

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಶನಿವಾರ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಯಿತು.

ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿಯನ್ನು ತನಿಖಾ ತಂಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತು. ವೈದ್ಯರ ತಂಡವು ಶರಣರ ಪುರುಷತ್ವ ಪರೀಕ್ಷೆ ನಡೆಸಿ, ಕೂದಲು ಹಾಗೂ ಉಗುರು ಮಾದರಿಗಳನ್ನು ಸಂಗ್ರಹಿಸಿತು.

ಪ್ರಕರಣದ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರ ಪುರುಷತ್ವ ಪರೀಕ್ಷೆ ನಡೆಸಲಾಗಿದೆ. ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಈ ಪರೀಕ್ಷೆ ಮಾಡಲಾಗುತ್ತದೆ. ಆರೋಪಿ ಹೇಳಿಕೆ ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಲಾಗಿದೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತನಿಖಾಧಿಕಾರಿ ಡಿವೈಎಸ್‌ಪಿ ಅನಿಲ್‌ಕುಮಾರ್‌ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದೆ. ಆರೋಪಿ ಅಸಹಕಾರ ತೋರಿದ್ದರಿಂದ ಶುಕ್ರವಾರ ರಾತ್ರಿ ವಿಶ್ರಾಂತಿ ನೀಡಲಾಗಿತ್ತು. ಚಾಪೆಯ ಮೇಲೆ ಅವರು ರಾತ್ರಿ ಕಳೆದರು. ಶನಿವಾರ ಬೆಳಿಗ್ಗೆ 6.30ಕ್ಕೆ ಎದ್ದು ನಿತ್ಯಕರ್ಮ ಮುಗಿಸಿದ ನಂತರ ತನಿಖಾಧಿಕಾರಿ ಎದುರು ಹಾಜರಾದರು ಎಂದು ಮೂಲಗಳು ಮಾಹಿತಿ ನೀಡಿವೆ.

ವಕೀಲರ ಸಮ್ಮುಖದಲ್ಲಿ ಆರೋಪಿ ವಿಚಾರಣೆಗೆ ಅವಕಾಶ ಕಲ್ಪಿಸುವಂತೆ ಮುರುಘಾ ಶರಣರ ಪರ ವಕೀಲರು ನ್ಯಾಯಾಲಯವನ್ನು ಕೋರಿಕೊಂಡಿದ್ದರು. ಸಿಆರ್‌ಪಿಸಿ ಸೆಕ್ಷನ್‌ 41–ಡಿ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ನ್ಯಾಯಾಧೀಶೆ ಬಿ.ಕೆ.ಕೋಮಲಾ ಪರಿಗಣಿಸಿದರು. ಕೆಲ ಸಂದರ್ಭಗಳನ್ನು ಹೊರತುಪಡಿಸಿ ವಕೀಲರ ಸಮ್ಮುಖದಲ್ಲಿ ಆರೋಪಿಯ ವಿಚಾರಣೆ ನಡೆಸಲಾಯಿತು.

ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ಅಮಾನತು
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನ ಹಾಗೂ ವಿಶ್ವಸ್ಥ ಸಮಿತಿಯ ಸದಸ್ಯತ್ವದಿಂದ ಶಿವಮೂರ್ತಿ ಮುರುಘಾ ಶರಣರನ್ನು ಅಮಾನತುಗೊಳಿಸಲಾಗಿದೆ. ಶನಿವಾರ ನಡೆದ ವಿಶ್ವಸ್ಥ ಸಮಿತಿಯ ತುರ್ತು ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

‘ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿ ಕ್ರಿಮಿನಲ್‌ ಆಪಾದನೆ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ತಕ್ಷಣದಿಂದ ಜಾರಿಗೆ ಬರುವಂತೆ ಈ ಕ್ರಮ ಜರುಗಿಸಲಾಗಿದೆ’ ಎಂದು ವಿಶ್ವಸ್ಥ ಸಮಿತಿ ಗೌರವ ಕಾರ್ಯದರ್ಶಿ ಪ್ರೊ.ಕೆ.ಇ.ರಾಧಾಕೃಷ್ಣ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದರಿಂದ ಕುಪಿತಗೊಂಡ ಸ್ಥಳೀಯರು ಅನಾಥಸೇವಾಶ್ರಮಕ್ಕೆ ನುಗ್ಗಿ ದಾಂದಲೆ ನಡೆಸಿದ್ದರು. ಶಿವಮೂರ್ತಿ ಮುರುಘಾ ಶರಣರ ಪ್ರತಿಮೆ ಧ್ವಂಸಗೊಳಿಸಿ, ಅವರ ಭಾವಚಿತ್ರಕ್ಕೆ ಬೆಂಕಿ ಹಾಕಿದ್ದರು.

ಪೂಜೆ, ದಾಸೋಹ ನಿರಂತರ: ಮುರುಘಾ ಶರಣರ ಬಂಧನದಿಂದ ಮಠದಲ್ಲಿ ಚಟುವಟಿಕೆ ಸ್ತಬ್ಧವಾಗಿಲ್ಲ. ಕರ್ತೃಗದ್ದುಗೆ ಪೂಜೆ, ದಾಸೋಹ ನಿರಂತರವಾಗಿ ನಡೆಯಲಿದೆ ಎಂದು ಮಠ ತಿಳಿಸಿದೆ. ‘ಪ್ರತಿ ತಿಂಗಳು ನಡೆಯುವ ಸಾಮೂಹಿಕ ವಿವಾಹ ನಿಲ್ಲುವುದಿಲ್ಲ. ಇದೇ 5ರಂದು ಪ್ರತಿ ಬಾರಿಯಂತೆ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಎಂದು ಮಠದ ಉಸ್ತುವಾರಿ ವಹಿಸಿಕೊಂಡಿರುವ ಮಹಾಂತ ರುದ್ರೇಶ್ವರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಮೀನು ಕೋರಿ ಅರ್ಜಿ: ಮುರುಘಾ ಶರಣರಿಗೆ ಜಾಮೀನು ನೀಡುವಂತೆ ಕೋರಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ವಕೀಲ ಕೆ.ಎನ್‌.ವಿಶ್ವನಾಥಯ್ಯ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲನೆಯ ಹಂತದಲ್ಲಿದ್ದು, ಸೋಮವಾರ ನ್ಯಾಯಾಧೀಶರ ಮುಂದೆ ಬರುವ ಸಾಧ್ಯತೆ ಇದೆ.

ಪ್ರಕರಣದ ಮೂರನೇ ಆರೋಪಿ 17 ವರ್ಷದ ಬಾಲಕನ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಕೆಗೆ ಸೋಮವಾರ ಅವಕಾಶ ನೀಡಲಾಗಿದೆ. ನಾಲ್ಕನೇ ಆರೋಪಿ ಪರಮಶಿವಯ್ಯ ಹಾಗೂ ಐದನೇ ಆರೋಪಿ ಗಂಗಾಧರ್‌ ಕೂಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ತಕರಾರು ಸಲ್ಲಿಕೆಗೆ ಇದೇ 7ರವರೆಗೆ ಅವಕಾಶ ನೀಡಲಾಗಿದೆ. ಎರಡನೇ ಆರೋಪಿ ಹಾಸ್ಟೆಲ್‌ ವಾರ್ಡನ್‌ ನ್ಯಾಯಾಂಗ ಬಂಧನದಲ್ಲಿದ್ದು, ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ.

ಬಾಲಕಿಯೊಂದಿಗೆ ಮಾತನಾಡಲು ಅವಕಾಶ ಕೊಡಿ
ಚಿತ್ರದುರ್ಗ: ‘ಬಾಲಕಿಯೊಂದಿಗೆ ಮಾತನಾಡಲು ಅವಕಾಶ ನೀಡಿ. ಎಸ್‌.ಕೆ.ಬಸವರಾಜನ್‌ ಅವರನ್ನು ಕೂಲಂಕಷವಾಗಿ ವಿಚಾರಣೆ ನಡೆಸಿ’ ಎಂದು ಸಂತ್ರಸ್ತ ಬಾಲಕಿಯ ಪೋಷಣೆಯ ಹೊಣೆ ಹೊತ್ತಿರುವ ಚಿಕ್ಕಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದ್ದಾರೆ.

‘ಬಾಲಕಿ ಒಂದೂವರೆ ವರ್ಷದಿಂದ ಮುರುಘಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಠದ ಆಡಳಿತಾಧಿಕಾರಿಯಾಗಿದ್ದ ಎಸ್‌.ಕೆ.ಬಸವರಾಜನ್‌ ಅವರ ಮನೆಯಲ್ಲಿ ಜುಲೈ 27ರಂದು ಬಾಲಕಿ ಇರುವ ಮಾಹಿತಿ ತಿಳಿದು ಗಾಬರಿಯಾಯಿತು. ಮನೆಗೆ ಬರುವಂತೆ ಮಾಡಿಕೊಂಡ ಮನವಿಗೆ ಆಕೆ ಸ್ಪಂದಿಸಲಿಲ್ಲ. ಬಸವರಾಜನ್‌ ಹಾಗೂ ಸೌಭಾಗ್ಯ ಅವರ ಜೊತೆಗೆ ಇರುವುದಾಗಿ ಹೇಳಿದ್ದಳು. ಏಕಾಏಕಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಆರೋಪ ಮಾಡಿರುವುದನ್ನು ಕೇಳಿ ಅಚ್ಚರಿಯಾಗಿದೆ. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್‌ ಠಾಣೆಯಿಂದ ಬಾಲಕಿಯನ್ನು ಕರೆತಂದ ಬಸವರಾಜನ್‌, ನನ್ನ ಮನೆಗೆ ಕಳುಹಿಸಿಲ್ಲ. ತಮ್ಮ ಬಳಿಯೇ ಇಟ್ಟುಕೊಂಡು ವಿನಾ ಕಾರಣ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಯಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!