ಪಡುಬಿದ್ರಿ ಮಾದಕ ವಸ್ತು ಸೇವನೆ ಪ್ರಕರಣ-ಮೂವರು ವಶಕ್ಕೆ
ಪಡುಬಿದ್ರಿ ಸೆ.3(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಮ್ಮದ್ ಫವಾಜ್ (18), ಗುರುನಾಥ ಆರ್ (23), ಮಹಮ್ಮದ್ ಅಫ್ಜಲ್ (22) ಪೊಲೀಸರು ವಶಕ್ಕೆ ಪಡೆದ ಯುವಕರು. ಆ.30 ರಂದು ಪಡುಬಿದ್ರೆ ಪೊಲೀಸರು ಕರ್ತವ್ಯದಲ್ಲಿದ್ದ ವೇಳೆ ಮೂವರು ಯುವಕರು ಅಮಲಿನಲ್ಲಿ ಇದ್ದಂತೆ ಕಂಡು ಬಂದ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ಕಾಪುವಿನ ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಮಹಮ್ಮದ್ ಫವಾಜ್ ಹಾಗೂ ಮಹಮ್ಮದ್ ಅಫ್ಜಲ್ ಎಂಬ ಇಬ್ಬರನ್ನು ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಗುರುನಾಥ ಆರ್ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ಮೂವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.