ಮುರುಘಾ ಮಠದ ಶರಣರ ಪ್ರಕರಣ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ- ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ ಸೆ.3: ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರ ಪ್ರಕರಣ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ, ಅದರ ಬಗ್ಗೆ ಮಾತನಾಡಿದರೆ ಅನಿಷ್ಟ ಬರುತ್ತದೆ. ಕೇಸು ನಡೆಯುತ್ತಿರುವಾಗ ಮಾತನಾಡುವುದು ಏಕೆ ಎಂದು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಈ ಪ್ರಕರಣ ಬಗ್ಗೆ ಮಾತನಾಡಲು ನನಗೆ ಮನಸ್ಸಿಲ್ಲ, ಅದರ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ, ಕೇಸು ನಡೆಯುತ್ತಿರುವಾಗ ಮಾತನಾಡುವುದು ಏಕೆ. ಪ್ರಕರಣದ ತನಿಖೆ ನ್ಯಾಯಾಲಯದಲ್ಲಿ ನಡೆಯುತ್ತಿದೆ, ತೀರ್ಪು ಬರಲಿ ಆಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದರು.
ಹಾಗೂ ಹಿಂದೂ ಧರ್ಮಕ್ಕೆ ಪ್ರೇರಣೆ ಆಗುವುದು ಸಾಧು ಸಂತರು, ಮಠದ ಬಗ್ಗೆ ನನಗೆ ಹಿಂದಿನಿಂದಲೂ ಗೌರವವಿದೆ, ಈಗಲೂ ಇದೆ ಮುಂದೆಯೂ ಇರುತ್ತದೆ, ಪ್ರಕರಣ ಕೇಳಿ ಬಂದಾಗಿನಿಂದ ಇದು ಸುಳ್ಳಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಮುರುಘಾ ಮಠಾಧೀಶರ ಬಗ್ಗೆ ನನಗೆ ಗೌರವವಿದೆ, ಅವರ ಬಗ್ಗೆ ತನಿಖೆ ನಡೆದು ಸತ್ಯವೇ, ಸುಳ್ಳೇ ಎಂದು ಹೊರಗೆ ಬರಲಿ, ಒಂದೇ ಸಲಕ್ಕೆ ತೀರ್ಮಾನಕ್ಕೆ ಬರುವುದು ಬೇಡ, ಇಡೀ ದೇಶದಲ್ಲಿ ಮಠಮಂದಿರಗಳು ಜನರಲ್ಲಿ ಭಕ್ತಿಯನ್ನು ಹೆಚ್ಚಿಸುವ ಧಾರ್ಮಿಕ ಕೇಂದ್ರಗಳು, ಮುರುಘಾ ಮಠಾಧೀಶರ ಬಗ್ಗೆ ಕೇಳಿಬಂದಿರುವ ಆರೋಪ ಸುಳ್ಳಾಗಲಿ ಎಂದು ಆಶಿಸುತ್ತೇನೆ ಎಂದರು.