ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕಟಕ್ ಸೆ.3: ಒಡಿಶಾದ ಕಟಕ್ನ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಕುಮಾರ್ ಬೆಹಾರಿ ಅವರ ಮೃತದೇಹವು ಅವರ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
ಸುಭಾಷ್ ಕುಮಾರ್ ಬೆಹಾರಿ (49) ಅವರ ಅಧಿಕೃತ ನಿವಾಸದಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಕುತ್ತಿಗೆಯಲ್ಲಿ ಗಾಯದ ಗುರುತುಗಳಿವೆ ಎಂದು ಕಟಕ್ ನಗರ ವಲಯ 3ರ ಸಹಾಯಕ ಪೊಲೀಸ್ ಕಮಿಷನರ್ ತಪಸ್ ಪ್ರಧಾನ್ ಹೇಳಿದ್ದಾರೆ.
ಹಾಗೂ ಘಟನೆ ನಡೆದಾಗ ನ್ಯಾಯಾಧೀಶರ ಪತ್ನಿ ಮನೆಯಲ್ಲಿರಲಿಲ್ಲ. ಮಕ್ಕಳು ಶಾಲೆಗೆ ಹೋಗಿದ್ದರು. ಕಳೆದೆರಡು ದಿನಗಳಿಂದ ರಜೆಯಲ್ಲಿದ್ದ ನ್ಯಾಯಾಧೀಶರು ಶುಕ್ರವಾರ ಕೆಲಸಕ್ಕೆ ಹಾಜರಾಗಬೇಕಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ನ್ಯಾಯಾಧೀಶರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಾಥಮಿಕವಾಗಿ ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಟಕ್ ನ ಎಸ್.ಸಿ.ಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.