ಕೋಟ: ವಾಟ್ಸಪ್ ಹಾಗೂ ವಾಯ್ಸ್ ಮೆಸೇಜ್ ಮೂಲಕ 10 ಲಕ್ಷ ರೂ. ನೀಡುವಂತೆ ಕೊಲೆ ಬೆದರಿಕೆ
ಕೋಟ ಸೆ.2(ಉಡುಪಿ ಟೈಮ್ಸ್ ವರದಿ): ವಾಟ್ಸಪ್ ಕರೆ ಮಾಡಿ ಹಾಗೂ ವಾಯ್ಸ್ ಮೆಸೇಜ್ ಮೂಲಕ 10 ಲಕ್ಷಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಅಜಿತ್ ಕುಮಾರ್ ಶೆಟ್ಟಿ ಎಂಬವರು ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ.31 ರಂದು ಸಂಜೆ ವೇಳೆ ಅಜಿತ್ ಕುಮಾರ್ ಶೆಟ್ಟಿ ಇವರಿಗೆ ಓರ್ವ ಅಪರಿಚಿತ ವಾಟ್ಸಾಪ್ ಕರೆ ಮಾಡಿದ್ದು, ಸ್ವೀಕರಿಸದೇ ಇದ್ದಾಗ ಪದೇ ಪದೇ ಕರೆ ಮಾಡಿರುತ್ತಾನೆ. ಬಳಿಕ ಅಜಿತ್ ಅವರು ಕರೆ ಸ್ವೀಕರಿಸಿದಾಗ ಆ ವ್ಯಕ್ತಿ ತಾನು ಭರತ್ ದಾಸ ಎಂಬುವುದಾಗಿ ಹೇಳಿಕೊಂಡಿದ್ದು, ಬಳಿಕ 10,00,000 ಹಣವನ್ನು ಕೂಡಲೇ ನೀಡು ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಿಸುವುದಾಗಿ ಬೆದರಿಸಿರುತ್ತಾನೆ. ಮಾತ್ರವಲ್ಲದೆ ಸ್ವಲ್ಪ ಸಮಯದ ನಂತರ ವ್ಯಕ್ತಿಯು ವಾಟ್ಸಾಪ್ ನಲ್ಲಿ ವಾಯ್ಸ್ ಮೇಸೇಜನ್ನು ಕಳುಹಿಸಿದ್ದು, ಅದರಲ್ಲಿ ಅವಾಚ್ಯವಾಗಿ ನಿಂದಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.