ಕಾರ್ಕಳ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದ ಸ್ನೇಹಿತ
ಕಾರ್ಕಳ ಸೆ.2(ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಸ್ನೇಹಿತನಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿರುವ ಘಟನೆ ಕಾರ್ಕಳದ ಮಾಳ ಗ್ರಾಮದ ಹಳೆಪಳ್ಳಿ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಹಲ್ಲೆಗೆ ಒಳಗಾದ ನಾಗರಾಜ್ ಪೂಜಾರಿ ಎಂಬವರು ತಮ್ಮ ಸ್ನೇಹಿತ ಭರತ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಆ.31 ರಂದು ನಾಗರಾಜ್ ಪೂಜಾರಿ ಅವರು ಹಳೆಪಳ್ಳಿ ಎಂಬಲ್ಲಿ ಇರುವ ತನ್ನ ಅಣ್ಣನ ಮಗ ಸಂತೋಷ್ ರವರ ಮನೆಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಬಾಳೆಹೊನ್ನೂರು ವಾಸಿ ಭರತ್ ಎಂಬವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಭರತ್ ನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದರಿಂದ ಚೂರಿಯನ್ನು ಕೈಯಲ್ಲಿ ಹಿಡಿದುಕೊಳ್ಳಬೇಡ ಎಂದು ನಾಗರಾಜ್ ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತಾಗಿದ್ದು ಭರತ್ ನು ಕೈಯಲ್ಲಿ ಇದ್ದ ಚೂರಿಯಿಂದ ಒಮ್ಮೆಲೆ ನಾಗರಾಜ್ ಅವರ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರಂಭದಲ್ಲಿ ಸ್ನೇಹಿತ ಎಂಬ ಕಾರಣಕ್ಕೆ ದೂರು ನೀಡದೇ ಇದ್ದು, ಬಳಿಕ ನೋವು ಹೆಚ್ಚಾಗ ಹಿನ್ನೆಲೆಯಲ್ಲಿ ಮತ್ತೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.