ಬ್ರಹ್ಮಾವರ: ಬ್ಯಾಂಕ್ ಉದ್ಯೋಗಿಯಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ- ದೂರು ದಾಖಲು
ಬ್ರಹ್ಮಾವರ ಸೆ.2(ಉಡುಪಿ ಟೈಮ್ಸ್ ವರದಿ): ಹಣ ನೀಡುವಂತೆ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಬ್ರಹ್ಮಾವರದ ಪ್ರಜ್ಞಾ ಎಂಬವರು ತಮ್ಮ ಗಂಡ ಭರತ್ ರಾಜ್ ಸೇರಿದಂತೆ ಆತನ ಮನೆಯ 8 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳುವಾಯಿ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿಕೊಂಡಿರುವ ಪ್ರಜ್ಞಾ.ಜೆ ಅವರು ಕಳೆದ ವರ್ಷ ನವೆಂಬರ್ ನಲ್ಲಿ ಪೇತ್ರಿ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದ ಕೊಕ್ಕರ್ಣೆಯ ಭರತ್ ರಾಜ್ ನೊಂದಿಗೆ ಪೆರ್ಡೂರಿನಲ್ಲಿ ಮದುವೆ ಆಗಿದ್ದರು.
ಮದುವೆಯ ಸಮಯ ಪ್ರಜ್ಞಾ ಅವರ ತವರು ಮನೆಯಿಂದ 20 ಪವನ್ ಚಿನ್ನ ಹಾಗೂ 10 ಲಕ್ಷ ಹಣ ದೊಂದಿಗೆ ಮದುವೆಯ ಖರ್ಚು ವೆಚ್ಚ ನೋಡಿಕೊಂಡಿದ್ದರು. ಮಾತ್ರವಲ್ಲದೆ ಮದುವೆಯ ಮುಂಚಿತವಾಗಿ ಭರತನು ಒಂದು ಲಕ್ಷ ಹಣವನ್ನು ಪಡೆದುಕೊಂಡಿದ್ದ.
ಮದುವೆಯ ದಿನದಿಂದ ಹಿಡಿದು ಪ್ರತೀ ದಿನ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದು, ಹಾಗೂ ಆರೋಪಿ ಮಾವ ಸದಾನಂದ ಕೂಡಾ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ತರದೇ ಇದ್ದಲ್ಲಿ ಮಗನಿಗೆ ಬೇರೆ ಮದುವೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಇವರ ಜೊತೆಗೆ ಅತ್ತೆ ಪ್ರಭಾವತಿ ಮತ್ತು ನಾದಿನಿ ಭಾರತಿ ಕೂಡಾ ಕೆಲಸ ಬಿಡು, ತವರು ಮನೆಗೆ ಹೋಗಬಾರದು. ಮನೆಯಲ್ಲಿ ನಡೆದ ವಿಷಯವನ್ನು ಅವರಿಗೆ ಹೇಳಬಾರದು ಎಂದೆಲ್ಲಾ ಬೈಯುತ್ತಿದ್ದರು.
ಈ ಆರೋಪಿತರು ಸಮಾನ ಉದ್ದೇಶದಿಂದ ಕಳೆದ 9 ತಿಂಗಳಿನಿಂದಲೂ ವಿಪರೀತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಾಗೂ ಈ ಎಲ್ಲಾ ಘಟನೆಗಳಿಗೂ ಆರೋಪಿತರಾದ ಜಯಕುಮಾರ್, ನವಮಿ, ನಿಹಾಲ್, ರತ್ನಾಕರ ಇವರು ಕುಮ್ಮಕ್ಕು ನೀಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.