ಪೋಕ್ಸೋ ಪ್ರಕರಣ: ಬಂಧಿತ ಮುರುಘಾ ಶರಣಗೆ 3 ದಿನ ಕಾಲ ಪೊಲೀಸ್ ಕಸ್ಟಡಿ
ಚಿತ್ರದುರ್ಗ ಸೆ.2: ಪೋಕ್ಸೋ ಪ್ರಕರಣದಲ್ಲಿ ಬಂಧಿತ ಮುರುಘಾ ಮಠದ ಸ್ವಾಮೀಜಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು 3 ದಿನಗಳ ಕಾಲ ಪೆÇಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಮುರುಘಾ ಶ್ರೀಯವರನ್ನು ಪೊಲೀಸ್ ಕಸ್ಟಡಿಗೆ ನೀಡಿರುವ ನ್ಯಾಯಾಲಯ ಸೆಪ್ಟೆಂಬರ್ 5 ರಂದು ಮತ್ತೆ ಕೋರ್ಟ್ ಮುಂದೆ ಹಾಜರು ಮಾಡುವಂತೆ ಸೂಚಿಸಿದೆ. ಅದರಂತೆ ಸೆ.5 ರಂದು ಬೆಳಗ್ಗೆ 11 ಗಂಟೆಗೆ ಪೊಲೀಸರು ಶ್ರೀಗಳನ್ನು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇತ್ತ ನ್ಯಾಯಾಲಯದಿಂದ ಆದೇಶ ಹೊರಬೀಳುತ್ತಿದ್ದಂತೆ ಮುರುಘಾ ಶ್ರೀಗಳು ನ್ಯಾಯಾಧೀಶರ ಮುಂದೆಯೇ ಕಣ್ಣೀರಿಟ್ಟು ಸ್ಥಳದಲ್ಲೇ ಕುಸಿದುಬಿದ್ದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಆಗಸ್ಟ್ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು. ಅದರಂತೆ ಚಿತ್ರದುರ್ಗ ಪೊಲೀಸರು ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇನ್ನೊಂದೆಡೆ ಶ್ರೀಗಳ ವಿರುದ್ಧ ಪೊಲೀಸರು ಲುಕ್‍ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು. ಅದರಂತೆ ನಿನ್ನೆ ರಾತ್ರಿ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಪೊಲೀಸರು ಬಂಧಿಸಿದ್ದರು.