ಕರಾವಳಿಯ ಮೂಲಸೌಕರ್ಯಕ್ಕೆ ಸಾಗರಮಾಲಾ ಯೋಜನೆ ಶಕ್ತಿ- ಪ್ರಧಾನಿ ಮೋದಿ
ಮಂಗಳೂರು: ಕೊಚ್ಚಿಯಲ್ಲಿ ಸ್ವದೇಶಿ ಏರ್ ಕ್ರಾಫ್ಟ್ ಲೋಕಾರ್ಪಣೆಗೊಂಡಿರುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದೆ. ಮಂಗಳೂರಿನಲ್ಲಿ ರೂ. 3800 ಕೋಟಿ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ, ಭೂಮಿಪೂಜೆ ಆಗಿದೆ. ಕರ್ನಾಟಕದಲ್ಲಿ ವ್ಯಾಪಾರ, ಉದ್ಯೋಗ ಸಾಮರ್ಥ್ಯ ಹೆಚ್ಚಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಕರ್ನಾಟಕದ ರೈತರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಉತ್ಪಾದನಾ ಕ್ಷೇತ್ರ, ಮೇಕ್ ಇನ್ ಇಂಡಿಯಾ ಅಗತ್ಯ ಇದೆ. ಎಂಟು ವರ್ಷಗಳಲ್ಲಿ ದೇಶದ ಮೂಲಸೌಕರ್ಯ ದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಭಾರತಮಾಲಾ ಯೋಜನೆಯಲ್ಲಿ ರಸ್ತೆ ನಿರ್ಮಾಣ, ಕರಾವಳಿ ಮೂಲ ಸೌಕರ್ಯಕ್ಕೆ ಸಾಗರಮಾಲಾ ಶಕ್ತಿ ನೀಡಿದೆ. ದೇಶದ ಬಂದರುಗಳ ಸಾಮರ್ಥ್ಯ ದ್ವಿಗುಣಗೊಂಡಿದೆ ಎಂದು ಪಿಎಂ ಮೋದಿ ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಯೋಜನೆಗೊಂಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರು ಕರತಾಡನದ ಮೂಲಕ ಸ್ವಾಗತಿಸಿದರು.
ಮತ್ಸ್ಯ ಸಂಪದ ಯೋಜನೆ ಮೂಲಕ ಕರ್ನಾಟಕದ ಮೀನುಗಾರರ ಅಭಿವೃದ್ಧಿಗಾಗಿ ಕೆಲಸಮಾಡಲಾಗುತ್ತಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರವಾಸೋದ್ಯಮ ಅಭಿವೃದ್ಧಿಗೆ ಅತ್ಯುತ್ತಮ ಸ್ಥಳಗಳಾಗಿವೆ. ಪ್ರವಾಸೋದ್ಯಮ ಅಭಿವೃದ್ಧಿ ಸಮಾಜದ ಹಲವರಿಗೆ ಲಾಭವಾಗುತ್ತದೆ. ಭಾರತದಲ್ಲಿ ಕ್ರೂಸ್ ಟೂರಿಸಂ ನಿಂದ ಹೆಚ್ಚಿನ ನೀರಿಕ್ಷೆಗಳಿದ್ದು ಇದಕ್ಕೆ ನವ ಮಂಗಳೂರು ಬಂದರು ಸೂಕ್ತವಾಗಿದೆ.
ಮೆಟ್ರೋ ಸಂಪರ್ಕವನ್ನು ಹೆಚ್ಚಿಸಲಾಗಿದೆ. ದೇಶದ ಜನರಿಗೆ ವೇಗದ ಇಂಟರ್ನೆಟ್ ಅಗತ್ಯವಿದ್ದು, ದೇಶದ ಮೂಲೆ ಮೂಲೆಯಲ್ಲಿ ಆಧುನಿ ಮೂಲಸೌಕರ್ಯ ಗಳನ್ನು ಒದಗಿಸುವ ಕೆಲಸ ನಡೆಯುತ್ತಿದೆ. ಉಡಾನ್ ಯೋಜನೆ ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಜನರು ಪ್ರಯಾಣ ಮಾಡಿದ್ದಾರೆ. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಅನುಕೂಲಕರ ಚಿಕಿತ್ಸೆ ದೊರೆಯುತ್ತಿದೆ. ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ದೊರೆತಿದೆ. ಕರ್ನಾಟಕದಲ್ಲಿ 30 ಲಕ್ಷಕ್ಕೂ ಹೆಚ್ಚು ಬಡವರು ಇದರಿಂದ ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಮುದ್ರಾ ಯೋಜನೆ ಮೂಲಕ ಸಣ್ಣ ಉದ್ದಿಮೆದಾರರಿಗೆ ಲೋನ್ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಐತಿಹಾಸಿಕ ನವ ಮಂಗಳೂರು ಬಂದರು ಸಾಮಥ್ರ್ಯ ಹೆಚ್ಚಳ ಸೇರಿದಂತೆ ಇತರ ಯೋಚನೆಗಳು ಉದ್ಘಾಟನೆಗೊಂಡಿದೆ ಇದರಿಂದ ವ್ಯಾಪಾರ ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ಒಂದು ಜಿಲ್ಲೆ ಒಂದು ಉತ್ಪಾದನೆ ಮೂಲಕ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, 2014 ರ ನಂತರ 4 ಪಟ್ಟು ಹೆಚ್ಚು ರೈಲ್ವೆ ಯೋಜನೆಗಳ ಅನುದಾನ ಕರ್ನಾಟಕಕ್ಕೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಲ್ಲಿ 70,000 ಕೋಟಿ ರೂ.ಗಳ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳು ಚಾಲನೆಯಲ್ಲಿವೆ ಎಂದರು. ಸಚಿವ ಸರ್ಬಾನಂದ ಸೋನೊವಾಲ್ ಅವರು ಮೋದಿ ಅವರಿಗೆ ಹಾರ, ಪೇಟ ತೊಡಿಸಿ ಸ್ವಾಗತಿಸಿದರು. ಉಡುಪಿ ಶ್ರೀಕೃಷ್ಣನ ಮೂರ್ತಿ ನೀಡಿದರು.
ಡಬಲ್ ಇಂಜಿನ್ ಸರಕಾರ ಹಗಲು ರಾತ್ರಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೆಲಸಮಾಡುತ್ತಿದೆ. ಕಳೆದ 8 ವರ್ಷಗಳಲ್ಲಿ ಮೆಟ್ರೋ ಸಂಪರ್ಕ ಹೊಂದಿದ ನಗರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಕ್ಲೀನ್ ಎಕಾನಮಿ ಮೂಲಕ ಆನ್ಲೈನ್ ಪೇಮೆಂಟ್ ಇಂದು ಮೇಲ್ಮಟ್ಟದಲ್ಲಿ ನಡೆಯುತ್ತಿದೆ. ಭೀಮ್ ಸೇರಿ ವಿವಿಧ ಆ್ಯಪ್ ಗಳು ಜಗತ್ತಿನ ಗಮನ ಸೆಳೆಯುತ್ತಿದೆ. ಭಾರತದ ದೊಡ್ಡ ಉದ್ಯಮಿಗಳು ಕರ್ನಾಟಕದವರೇ ಆಗಿದ್ದಾರೆ. 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನೀರು ಪೂರೈಕೆ ಮಾಡಲಾಗಿದೆ.
ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡಲಾಗುತ್ತಿದ್ದು 30 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಕ್ಕೆ ಆಯುಷ್ಮಾನ್ ಯೋಜನೆಯನ್ನು ತಲುಪಿಸಲಾಗಿದೆ. ಬಡವರ ಹಣ ಉಳಿತಾಯ ಮಾಡಲು ಆಯುಷ್ಮಾನ್ ಭಾರತ್ ನೆರವು ನೀಡಿದೆ. ಭಾರತದ ಅನೇಕ ಬಡ ಕುಟುಂಬಗಳು ಆಯುಷ್ಮಾನ್ ಯೋಜನೆಯ ಫಲವನ್ನು ಪಡೆದುಕೊಂಡಿದೆ. ಕೋಟ್ಯಾಂತರ ಜನರು ದೇಶದ ಅಭಿವೃದ್ಧಿಯ ಪ್ರಯೋಜನವನ್ನು ಪಡೆದು ಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಭರವಸೆ ನೀಡಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸುವವರಿಗೆ ನಮ್ಮ ಅಭಿವೃದ್ಧಿಯೇ ಉತ್ತರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ, ಡಬಲ್ ಎಂಜಿನ್ ಸರ್ಕಾರ ಕರ್ನಾಟಕದ ಜತೆಗೆ ದೇಶದ ಆಭಿವೃದ್ಧಿಗೂ ಕಾರಣವಾಗಿದೆ. ಎಸ್‌ಇಜೆಡ್ ಮಾರ್ಗಸೂಚಿಗಳನ್ನು ಬದಲಿಸಬೇಕು ಎಂಬ 30 ವರ್ಷಗಳ ಬೇಡಿಕೆ ಈಗ ಈಡೇರಿದೆ. ಮೋದಿ ಅವರು ಸಿಆರ್‌ಜೆಡ್ ಮಾಸ್ಟರ್ ಪ್ಲಾನ್‌ಅನ್ನು ಅನುಮೋದಿಸಿದ್ದಾರೆ ಎಂದರು.
ರಾಜ್ಯದ ಎರಡು ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನೆರಡು ಬಂದರುಗಳ ಸಂರ್ಥ್ಯವನ್ನು ಹೆಚ್ಚಿಸಲಾಗಿದೆ. ನವಕರ್ನಾಟಕದ ಅಭಿವೃದ್ಧಿಯಲ್ಲಿ ನವ ಭಾರತದ ಅಭಿವೃದ್ಧಿಯೂ ಅಡಗಿದೆ ಎಂದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಸಂಸದರಾದ ನಳೀನ್ ಕುಮಾರ್ ಕಟೀಲ್, ಕೇಂದ್ರದ ಜಲ ಸಾರಿಗೆ ಸಚಿವರಾದ ಸರ್ಬಾನಂದ ಸೋನೋವಾಲ್, ಶಾಂತನೂ ಠಾಕೂರ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಶಾಸಕರು ಹಾಗೂ ಅಧಿಕಾರಿಗಳು ವೇದಿಕೆಯಲ್ಲಿದ್ದರು.