ಕರಾವಳಿ ಅಭಿವೃದ್ಧಿಗೆ ಪ್ರಧಾನಿ ಮೋದಿ ಅತ್ಯಂತ ದೊಡ್ಡ ಶಕ್ತಿ ನೀಡುತ್ತಿದ್ದಾರೆ- ಸಿಎಂ ಬೊಮ್ಮಾಯಿ
ಮಂಗಳೂರು ಸೆ.2(ಉಡುಪಿ ಟೈಮ್ಸ್ ವರದಿ): ಹಲವು ಸಮಯದ ಬಳಿಕ ಕರಾವಳಿ ಪ್ರದೇಶಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು 3800 ಕೋ. ರೂ.ಗಳ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲನ್ಯಾಸ ಮಾಡಲಿದ್ದಾರೆ. ಈ ಮೂಲಕ ಕರಾವಳಿ ಅಭಿವೃದ್ಧಿಗೆ ಅತ್ಯಂತ ದೊಡ್ಡ ಶಕ್ತಿಯನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಇಂದು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ, ಇಡೀ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಗಳಿಗೆ ಪ್ರಧಾನಿ ಅವರು ಮಂಜೂರಾತಿ ನೀಡಿದ್ದಾರೆ. ಇವುಗಳು ಆರ್ಥಿಕ ಚಟುವಟಿಕೆ ಮತ್ತು ಬಂದರುಗಳ ಸಾಮಥ್ರ್ಯ ಹಾಗೂ ವ್ಯವಹಾರಗಳನ್ನು ಹೆಚ್ಚಿಸುವ ಹಾಗೂ ಉದ್ಯೋಗವನ್ನು ವೃದ್ಧಿಸುವ ಯೋಜನೆಗಳಾಗಿವೆ. ಕರ್ನಾಟಕಕ್ಕೆ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಂಜೂರು ಮಾಡಿದ್ದಾರೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವೂ ಹಲವಾರು ಯೋಜನೆಗಳನ್ನು ಈ ಭಾಗಕ್ಕೆ ಜಾರಿ ಮಾಡಿದ್ದು ಈ ಎಲ್ಲಾ ಯೋಜನೆಗಳಿಗೆ ಇಂದು ಚಾಲನೆ ದೊರೆಯಲಿದೆ ಎಂದು ತಿಳಿಸಿದರು.