ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ..? ಭಾಷಣದಲ್ಲಿ ಉತ್ತರಿಸಿ- ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಸೆ.2 : ಇಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ವಾಗತ ಕೋರಿದ್ದಾರೆ. ಹಾಗೂ “ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ?” ಎಂಬುದಕ್ಕೆ ಇಂದಿನ ಭಾಷಣದಲ್ಲಿ ಉತ್ತರಿಸಿ ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ #AnswerMadiModi ಎಂಬ ಹ್ಯಾಷ್ ಟ್ಯಾಗ್ ನಡಿ ಸರಣಿ ಟ್ವೀಟ್ ಮಾಡಿರುವ ಅವರು ಹಲವು ಗಳನ್ನು ಕೇಳಿದ್ದಾರೆ. ಹಾಗೂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಕೇಳಿರುವ ಪ್ರಶ್ನೆಗಳು ಹೀಗಿವೆ
“ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳೂರಿಗೆ ಸ್ವಾಗತ. ನಿಮ್ಮ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ನಿಮ್ಮ ಇಂದಿನ ಭಾಷಣದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿನಯಪೂರ್ವಕ ಮನವಿ”.
“ದಕ್ಷಿಣ ಕನ್ನಡದ ಉದ್ಯಮಶೀಲ ಹಿರಿಯರು ಸಿಂಡಿಕೇಟ್, ಕಾರ್ಪೊರೇಷನ್, ವಿಜಯಾ, ಕೆನರಾ ಮತ್ತು ಕರ್ಣಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ. ಇದು ವಿಕಾಸವೋ? ವಿನಾಶವೋ ?”.
“ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರು- ಹಾಜಿ ಅಬ್ದುಲ್ಲಾ (1906), ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ, ವಾಮನ್ ಕುಡ್ವಾ (1925) ವಿಜಯಾ ಬ್ಯಾಂಕ್ ಸ್ಥಾಪಕರು- ಎ.ಬಿ.ಶೆಟ್ಟಿ (1931) ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ನಡೆ ಈ ಅಮರವೀರರಿಗೆ ಬಗೆದ ದ್ರೋಹವಲ್ಲವೇ ?”
“ಬಜ್ಪೆ ವಿಮಾನ ನಿಲ್ದಾಣ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೊಡುಗೆ(25-12-1971). ಇದು ಸಂಸದ ಯು.ಶ್ರೀನಿವಾಸ ಮಲ್ಯರ ಪ್ರಯತ್ನದ ಫಲ. ಈ ವಿಮಾನ ನಿಲ್ದಾಣವನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಅರ್ಪಿಸಿದ್ದು (20-10-2020) ಪ್ರಧಾನಿ ನರೇಂದ್ರ ಮೋದಿ. ಇದು ವಿಕಾಸವೋ? ವಿನಾಶವೋ ?”
“ನವಮಂಗಳೂರು ಬಂದರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೊಡುಗೆ (1975). ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ನವಮಂಗಳೂರು ಬಂದರನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರುತ್ತಿರುವುದು ಪ್ರಧಾನಿ ನರೇಂದ್ರ ಮೋದಿ. ಇದು ವಿಕಾಸನೋ? ವಿನಾಶನೋ?”
“ಬಜ್ಪೆ ವಿಮಾನ ನಿಲ್ದಾಣ, ಎನ್ ಎಂಪಿಟಿ, ಎನ್ ಎಚ್-66, ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್- ಇವೆಲ್ಲ ಕಾಂಗ್ರೆಸ್ ಸಂಸದರ ಕೊಡುಗೆ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಕೊಡುಗೆ ಏನು? ಮಳೆಯಲ್ಲಿ ಮುಳುಗುವ ಮಂಗಳೂರು? ಕೋಮುದ್ವೇಷದ ಬೆಂಕಿಯಲ್ಲಿ ಬೇಯುತ್ತಿರುವ ಮಂಗಳೂರು? ಇದು ವಿಕಾಸವೋ? ವಿನಾಶನೋ ಪ್ರಧಾನಿ ನರೇಂದ್ರ ಮೋದಿ?”
“ದಕ್ಷಿಣ ಕನ್ನಡದ ವಿಕಾಸ ಪುರುಷರು ಕಾಂಗ್ರೆಸ್ ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಕೆಮ್ತೂರು ಕಾಂತಪ್ಪ ಶೆಟ್ಟಿ ಮತ್ತು ಬೋಳಾರ ಜನಾರ್ದನ ಪೂಜಾರಿ. ದಕ್ಷಿಣ ಕನ್ನಡದ ವಿನಾಶ ಪುರುಷ- ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು. ಇದು ವಿಕಾಸವೋ? ವಿನಾಶವೋ ?”
“ಜೂನ್ ತಿಂಗಳೊಂದರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದುವರೆ ಕೋಟಿ ಬೆಲೆಯ ಮಾದಕದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾದಕದ್ರವ್ಯ ಸೇವನೆಯಲ್ಲಿ ದೇಶದಲ್ಲಿಯೇ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಇದು ವಿಕಾಸನೋ? ವಿನಾಶನೋ ?”
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ಹೆಜ್ಜೆಹೆಜ್ಜೆಗೂ ಗುಂಡಿಬಿದ್ದ ರಸ್ತೆಗಳು, ಕುಸಿದು ಬಿದ್ದಿರುವ ಮನೆಗಳು, ನೆರೆಯಲ್ಲಿ ಕೊಚ್ಚಿಹೋದ ರೈತರ ಬೆಳೆಗಳ ಭೇಟಿಗಾಗಿ ಮಳೆ ಹುಳುಕನ್ನು ಮುಚ್ಚಿಟ್ಟು ರಸ್ತೆಗಳಿಗೆ ತೇಪೆ ಹಾಕಲಾಗಿದೆ. ಇದು ವಿಕಾಸನೋ? ವಿನಾಶನೋ ?”
ಕಳೆದ ಮೂರು ವರ್ಷಗಳಲ್ಲಿ ಕಡಲ್ಕೊರೆತ ತಡೆಗೆ ರಾಜ್ಯ ಬಿಜೆಪಿ ಸರಕಾರ ಖರ್ಚು ಮಾಡಿರುವ ಹಣ ಅಂದಾಜು ರೂ.250 ಕೋಟಿ. ಇದರಲ್ಲಿ 40% ಜನಪ್ರತಿನಿಧಿಗಳ ಜೇಬಿಗೆ, 60% ಕಡಲ ನೀರಿಗೆ. ಕಡಲ್ಕೊರೆತ ಮುಂದುವರಿದಿದೆ. ಇದು ವಿಕಾಸವೋ? ವಿನಾಶನೋ
“ಕರಾವಳಿ ಮೀನುಗಾರರ ಮೇಲೆ ಸಿಆರ್ ಜೆಡ್, ಸಿಎಂ ಜೆಡ್ ನಿಯಮಾವಳಿಗಳ ಹೇರಿಕೆ. ಪ್ರವಾಸೋದ್ಯಮದ ಹೆಸರಲ್ಲಿ ರೆಸಾರ್ಟ್, ಥೀಮ್ ಪಾರ್ಕ್ ಗಳಿಗೆ ಮುಕ್ತ ಪರವಾನಿಗೆ. ಇದು ವಿಕಾಸನೋ? ವಿನಾಶನೋ ?”
“48 ಕಿ.ಮೀ. ಅಂತರದಲ್ಲಿ ಬ್ರಹ್ಮರಕೂಟ್ಲು, ಸುರತ್ಕಲ್, ತಲಪಾಡಿ ಮತ್ತು ಹೆಜಮಾಡಿಗಳಲ್ಲಿ 4 ನಿಯಮಬಾಹಿರ ಟೋಲ್ ಗೇಟ್ ಗಳು. ವಾಹನ ಸಂಚಾರಿಗಳ ಜೇಬು ಖಾಲಿ, ಅಕ್ರಮದ ರೂವಾರಿಗಳಾದ ಬಿಜೆಪಿಯ ಸಂಸದರು ಮತ್ತು ರಾಜ್ಯ ಬಿಜೆಪಿ ಶಾಸಕರ ಜೇಬು ಭರ್ತಿ. ಇದು ವಿಕಾಸನೋ? ವಿನಾಶನೋ ?” ಎಂದು ಪ್ರಶ್ನಿಸಿದ್ದಾರೆ.