ಮಂಗಳೂರಿಗೆ ಪ್ರಧಾನಿ ಮೋದಿ- ಹಲವು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್
ಬೆಂಗಳೂರು:ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಕಮಲ ಪಾಳಯವನ್ನು ಅಣಿಗೊಳಿಸುವ ಉದ್ದೇಶದಿಂದ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಜೂನ್‌ನಲ್ಲಿ ಬೆಂಗಳೂರು ಮತ್ತು ಮೈಸೂರಿಗೆ ಮೋದಿ ಭೇಟಿ ನೀಡಿದ್ದರು. ಮಂಗಳೂರಿಗೆ ಇಂದು ಬರಲಿರುವ ಅವರು ರೂ 3,800 ಕೋಟಿ ಮೊತ್ತದ 8 ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.
ಮೋದಿಯವರು ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯ ಬಳಿಕ ಪಕ್ಷದ ರಾಜ್ಯಘಟಕದ ಪ್ರಮುಖರ ಸಭೆಯನ್ನೂ ನಡೆಸಲಿದ್ದು, ಯಾವ ರೀತಿಯ ಸಂದೇಶ ನೀಡಲಿದ್ದಾರೆ ಎಂಬ ಚರ್ಚೆಯೂ ನಡೆದಿದೆ.
ವಿಧಾನಸಭಾ ಚುನಾವಣೆಗೆ ನಡೆಸಬೇಕಾದ ತಯಾರಿಗಳ ಬಗ್ಗೆ ಸಲಹೆ ನೀಡಲಿರುವ ಅವರು, ರಾಜ್ಯ ಸರ್ಕಾರದ ಆಡಳಿತ ಮತ್ತು ಕಾರ್ಯಕ್ರಮಗಳ ಬಗ್ಗೆ ಸುಮಾರು ಒಂದು ಗಂಟೆ ಹೊತ್ತು ಜತೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸೇರಿ ಪ್ರಮುಖ ನಾಯಕರು ಭಾಗವಹಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಶೇ 40ರಷ್ಟು ಲಂಚದ ಸರ್ಕಾರ’ ಎಂದು ರಾಜ್ಯ ಸರ್ಕಾರವನ್ನು ದೂಷಿಸುತ್ತಿರುವ ಕಾಂಗ್ರೆಸ್, ಇದರ ವಿರುದ್ಧ ಸರಣಿ ಹೋರಾಟಕ್ಕೆ ಸಜ್ಜುಗೊಳ್ಳುತ್ತಿದೆ. ಈ ವಿಷಯ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರಕ್ಕೂ ಕಾರಣವಾಗಿದೆ. ಬಿಜೆಪಿ ಹಮ್ಮಿಕೊಂಡಿರುವ ಜನೋತ್ಸವಕ್ಕೆ ಪರ್ಯಾಯವಾಗಿ ‘90% ವಚನ ವಂಚನೆ; ಬಿಜೆಪಿ ನಿಮ್ಮಲ್ಲಿದೆಯಾ ಉತ್ತರ’ ಎಂಬ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದ್ದು, ಪ್ರಶ್ನೆ ಕೇಳಲು ಶುರು ಮಾಡಿದೆ. ಮೋದಿ ಅವರು ಭೇಟಿ ನೀಡುವ ಮುನ್ನ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಕ್ಕೆ ನೀಡಿದ ಕೊಡುಗೆಯೇನು ಎಂದು ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಮಳೆಯಿಂದ ಹಾನಿಗೊಳಗಾಗಿರುವ ‘ಬೆಂಗಳೂರನ್ನು ಕಾಪಾಡಿ’ ಎಂದು ಪ್ರಧಾನಿಯವರನ್ನು ಟ್ಯಾಗ್ ಮಾಡಿ ಬುಧವಾರ ಟ್ವೀಟ್ ಮಾಡಿ, ಗಮನ ಸೆಳೆದಿದ್ದ ಉದ್ಯಮಿ ಟಿ.ವಿ. ಮೋಹನದಾಸ್ ಪೈ, ‘ಭ್ರಷ್ಟಾಚಾರ ಮುಕ್ತ ಸರ್ಕಾರ ಬೇಕು’ ಎಂದು ಪ್ರತಿಪಾದಿಸಿರುವ ಮತ್ತೊಂದು ಟ್ವೀಟನ್ನು ಗುರುವಾರ ಮಾಡಿದ್ದಾರೆ.
ಇದನ್ನು ಉಲ್ಲೇಖಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದರೆ ಬೆಂಗಳೂರಿಗೆ ಪರಿಹಾರ ಸಿಗುವುದಿಲ್ಲ. ಬೆಂಗಳೂರು ರಕ್ಷಣೆ ಮಾಡುವ ಕೆಲಸ ಪ್ರಧಾನಿ ಕೈಯಲ್ಲಿ ಇಲ್ಲ. ಆ ರೀತಿ ಭಾವಿಸಿದರೆ ಅವರಿಗೆ ನಿರಾಶೆಯಾಗುವುದು ಖಚಿತ’ ಎಂದು ಕುಟುಕಿದ್ದಾರೆ.
ಈ ಎಲ್ಲ ಪ‍್ರಶ್ನೆ, ಮನವಿಗಳಿಗೆ ಮೋದಿ ಉತ್ತರ ನೀಡುವರೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ. ಗುರುವಾರ ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬುದಾಗಿ ಮೋದಿ ಗುಡುಗಿರುವುದು ಪ್ರಶ್ನೆಗಳ ಮಹತ್ವವನ್ನು ಹೆಚ್ಚಿಸಿದೆ