ಲೈಂಗಿಕ ಕಿರುಕುಳ- ಮುರುಘಾ ಮಠದ ಪೀಠಾಧಿಪತಿಯ ಬಂಧನ
ಚಿತ್ರದುರ್ಗ: ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರನ್ನು ಪೋಕ್ಸೊ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ತಡ ರಾತ್ರಿ ಮುರುಘಾ ಮಠಕ್ಕೆ ತೆರಳಿ ಶರಣರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗಾಗಿ 30 ಕಿ.ಮೀ ದೂರದ ಚಳ್ಳಕೆರೆಗೆ ಕರೆದೊಯ್ದರು. ಡಿವೈಎಸ್‌ಪಿ ಕಚೇರಿಯಲ್ಲಿ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಅಧಿಕೃತವಾಗಿ ಬಂಧಿಸಿದರು. ವೈದ್ಯಕೀಯ ತಪಾಸಣೆಗಾಗಿ ಅಲ್ಲಿಂದ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ ನೇತೃತ್ವದ ವೈದ್ಯರ ತಂಡ ಶರಣರನ್ನು ಸುಮಾರು ಎರಡು ಗಂಟೆ ಕಾಲ ತಪಾಸಣೆ ನಡೆಸಿತು. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಆರೋಗ್ಯ ಸೇರಿ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಲಾಯಿತು. ಈ ಮಾಹಿತಿ ತಿಳಿದು ನೂರಾರು ಜನರು ಆಸ್ಪತ್ರೆಯ ಎದುರು ಜಮಾಯಿಸಿದರು. ಭಕ್ತರು, ಅನುಯಾಯಿಗಳಿಗೆ ಆಸ್ಪತ್ರೆ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದರು.
ನಸುಕಿನ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಎದುರು ಹಾಜರುಪಡಿಸಿದರು. ಶರಣರ ಪರ ವಕೀಲರು ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಮುರುಘಾಶ್ರೀ ಅವರನ್ನು ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದರು. ತಪಾಸಣೆ ನಡೆಸಿದ ಜೈಲು ಸಿಬ್ಬಂದಿ ಅವರನ್ನು ಕಾರಾಗೃಹಕ್ಕೆ ಕರೆದೊಯ್ದರು.
ಮೈಸೂರಿನ ನಜರಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ತನಿಖಾಧಿಕಾರಿಯಾಗಿದ್ದರು.