ನಾಳೆ ಪ್ರಧಾನ ಮಂತ್ರಿಗಳಿಂದ ರೂ.3,800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ
ಮಂಗಳೂರು, ಸೆ.1: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.2ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡುತ್ತಿದ್ದು ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ ಎಂಟು ಯೋಜನೆಗಳ ಲೋಕಾರ್ಪಣೆ, ಶಿಲನ್ಯಾಸ ನೆರವೇರಿಸುವರು.
ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 1.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನಡೆಯಲಿದೆ.
ಪ್ರಧಾನಿ ಲೋಕಾರ್ಪಣೆ ಮಾಡುವ ಯೋಜನೆಗಳಲ್ಲಿ, ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14 ರ ಯಾಂತ್ರೀಕರಣ (ರೂ. 281 ಕೋಟಿ), ಬಿಎಸ್ VI ಉನ್ನತೀಕರಣ ಯೋಜನೆ (ರೂ. 1829 ಕೋಟಿ), ಸಮುದ್ರ ನೀರಿನ ನಿರ್ಲವಣೀಕರಣ ಘಟಕ (ರೂ. 677 ಕೋಟಿ) ಗಳು ಸೇರಿವೆ.
ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ, ಎನ್ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ. 500 ಕೋಟಿ), ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (ರೂ. 100 ಕೋಟಿ), ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ (ರೂ. 100 ಕೋಟಿ) ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ. 100 ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಜೊತೆಗೆ, ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಹಾಗೂ ಶಂತನು ಠಾಕೂರ್ ಭಾಗವಹಿಸುವರು.