ಉಡುಪಿ: ಸೆ.4ರಂದು ‘ಯಶಸ್ವಿ-ಭವಿಷ್ಯದ ಧ್ರುವತಾರೆ’ ವಿದ್ಯಾರ್ಥಿ ವೃತ್ತಿ ಮಾರ್ಗದರ್ಶನ ಉದ್ಘಾಟನೆ

ಉಡುಪಿ ಸೆ.1(ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಜಂಟಿ ಆಶ್ರಯದಲ್ಲಿ “ಯಶಸ್ವಿ-ಭವಿಷ್ಯದ ಧ್ರುವತಾರೆ” ಎಂಬ ವಿದ್ಯಾರ್ಥಿ ವೃತ್ತಿ ಮಾರ್ಗದರ್ಶನ ಯೋಜನೆಯ ಉದ್ಘಾಟನೆ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ 90 ಶೇ. ಅಂಕ ಗಳಿಸಿದ ವಿದ್ಯಾಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಸೆ.4 ರಂದು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಕೊಡವೂರು ವಾರ್ಡ್ ನ ನಗರಸಭಾ ಸದಸ್ಯ ವಿಜಯ್ ಕೊಡವೂರು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ಮತ್ತು 16ನೇ ಶಾಲೆಗೇ ಉಚಿತ ಗುಂಪು ಅಪಘಾತ ವಿಮೆ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ 90% ಅಂಕ ಗಳಿಸಿದ ಉಡುಪಿ ಜಿಲ್ಲೆಯ 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು.

ಇದರ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ 2021-22 ಸಾಲಿನ ಶೈಕ್ಷೆಣಿಕ ವರ್ಷದಲ್ಲಿ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು https://forms.gle/k2ryU9tBsuDg2jD88 ಲಿಂಕ್ ನಲ್ಲಿ ನೋಂದಣಿ ಮಾಡಿಕೊಂಡು. ತಮ್ಮ ಆಧಾರ್ ಕಾರ್ಡ್ ಮತ್ತು 10ನೇ ತರಗತಿ ಅಂಕಪಟ್ಟಿಯ ಪ್ರತಿಯೊಂದಿಗೆ ಪೋಷಕರ ಜೊತೆಗೆ ಕಾರ್ಯಕ್ರಮಕ್ಕೆ ಹಾಜರಾಗಿ ಗೌರವಾರ್ಪಣೆ ಸ್ವೀಕರಿಸಬೇಕಾಗಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘದ ಸಂಸ್ಥಾಪಕ ಮಿತೇಶ್ ಕುಮಾರ್, ಸಹಸಂಚಾಲಕರಾದ ಸುಹಾಸ್ ಕೆಂಜೂರು, ಅಶೋಕ ಆಚಾರ್ಯ, ರಾಧಕೃಷ್ಣ ಶ್ರಿಯಾನ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!