ವಿಧಾನ ಸಭಾ ಚುನಾವಣೆ-2023: ಬಿಜೆಪಿಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಹೊಸ ಮುಖ..?

ಉಡುಪಿ: (ಉಡುಪಿ ಟೈಮ್ಸ್ ವಿಶೇಷ ವರದಿ) ಇನ್ನೇನು ಮುಂಬರುವ ವಿಧಾನ ಸಭಾ ಚುನಾವಣಾ ವರ್ಷ. ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರದಲ್ಲೂ ನಮ್ಮ‌ ಪಕ್ಷದ ಅಭ್ಯರ್ಥಿ ಯಾರಾಗಬಹುದು ಎಂಬ ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲದಲ್ಲಿದ್ದರೆ, ಮತದಾರ ಕೂಡ ಯಾರನ್ನು ಆರಿಸಿ ಕಳುಹಿಸಿದರೆ ಜನರ ಧ್ವನಿ ಆಗಿ ಕಾರ್ಯವಹಿಸಹುದು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದ್ದಾರೆ.

ಪ್ರಸ್ತುತ ಜಿಲ್ಲೆಯ ಎಲ್ಲಾ ಕ್ಷೇತ್ರವನ್ನು ಕಮಲ ಪಡೆ ಬಿಗಿದಪ್ಪಿಕೊಂಡಿದ್ದು, ಒಂದು ಕಾಲದಲ್ಲಿ ಕರಾವಳಿಯ ಭದ್ರ ಕೋಟೆಯಂತಿದ್ದ ಕೈ ಪಡೆ ಉಡುಪಿಯ ಐದು ಕ್ಷೇತ್ರದಲ್ಲಿ ಎಷ್ಟು ಸ್ಥಾನವನ್ನು ಗೆಲುವಿನ ದಡ ತಲುಪಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದಲ್ಲೂ ಬಿಜೆಪಿಯಲ್ಲಿ ಹೊಸ ಮುಖ..?

ಹೌದು…. ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ತನ್ನ ಚುನಾವಣಾ ರಣಾತಂತ್ರವನ್ನು ಕೊನೆಯವರೆಗೂ ಬಿಟ್ಟು ಕೊಡಲ್ಲ. ಕಳೆದ ಬಾರಿಯ ಉಡುಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಕಡೆ ಕ್ಷಣದವರೆಗೂ ಮಾಡಿರಲಿಲ್ಲ. ಅದರಂತೆ ಈ ಬಾರಿಯೂ ಹಾಲಿ ಶಾಸಕ ಕೆ. ರಘುಪತಿ ಭಟ್ ಅವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ‌ ಮಾತಲ್ಲ.

ಈಗಾಗಲೇ ಬಿಜೆಪಿಯ ಹಿರಿಯ ನಾಯಕರು ಈ ಬಾರಿ ಹೊಸ ಮುಖ ಪಕ್ಕಾ ಎನ್ನುತ್ತಿದ್ದಾರೆ. ಇದೇ ಮಾತು ಕೂಡ ಆರ್ ಎಸ್ ಎಸ್ ಪಡಸಾಲೆಯಲ್ಲೂ ಕೇಳಿ ಬರುತ್ತಿದೆ. ಆದರೆ ಕಾರ್ಯಕರ್ತರು ನಮಗೆ ಜನ ಸ್ನೇಹಿ, ಅಭಿವೃದ್ಧಿ, ಯುವ ಜನರು ಒಪ್ಪುವ, ಪಕ್ಷ ಸಂಘಟನೆಯಿಂದ ಹಿಡಿದು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ‌ ನಾಯಕ ರಘುಪತಿ ಭಟ್ ನಮ್ಮ ಮುಂದಿನ ಅಭ್ಯರ್ಥಿ ಎನ್ನುತ್ತಾರೆ.

ಉಡುಪಿ ಕ್ಷೇತ್ರದ ಬಿಜೆಪಿ ಟಿಕೆಟ್ ರೇಸ್ ನಲ್ಲಿರುವವರು ಯಾರು….? ಮೊದಲಾಗಿ ಈ ಹಿಂದೆ ಉಡುಪಿ ಜಿಲ್ಲಾಧ್ಯಕ್ಷ ಹುದ್ದೆ ಸಮರ್ಥವಾಗಿ ನಿಭಾಯಿಸಿದ್ದ, ಪ್ರಸ್ತುತ ದಿ.ಮೈಸೂರು ‌ಎಲೆಕ್ಟ್ರಿಕ್‌ ಬೋರ್ಡ್ ಅಧ್ಯಕ್ಷ ಕೆ.ಉದಯ್ ಕುಮಾರ್ ಶೆಟ್ಟಿ. ಇವರು ಆರ್‌ಎಸ್‌ಎಸ್ ವಲಯದಲ್ಲಿ, ಹಿರಿಯ ಮುಖಂಡರ ಜೊತೆ ಆತ್ಮೀಯವಾಗಿದ್ದು, ತಮ್ಮ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ನಿರಂತರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಮಂಗಳೂರು ಪ್ರಭಾರಿಯಾಗಿ ಪಕ್ಷ ಸಂಘಟನೆಯಲ್ಲೂ ಮುಂಚೂಣಿಯಲ್ಲಿರುವ ನಾಯಕರಾಗಿದ್ದಾರೆ. ಪಕ್ಷ ಗುರುತಿಸಿ ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲುವಿನತ್ತ ಹೆಜ್ಜೆ ಹಾಕುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು.

ಮೂಲವೊಂದರ‌ ಪ್ರಕಾರ ಕಾಪು ಕ್ಷೇತ್ರದಲ್ಲಿ ಈ ಬಾರಿ ಮೊಗವೀರ ಅಭ್ಯರ್ಥಿ ಅಲ್ಲದೆ ಬಂಟ ಸಮುದಾಯದಕ್ಕೆ ಟಿಕೆಟ್ ನೀಡಿದರೇ ಉಡುಪಿಯಲ್ಲಿ ಮೊಗವೀರ ಸಮುದಾಯದ ಮುಂಚೂಣಿ ನಾಯಕ, ಯುವಜನರ ನೇತಾರ ಯಶಪ್ಪಾಲ್ ಸುವರ್ಣ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದ್ದು. ಅವರು ಕೂಡ ತಮ್ಮ ಪ್ರಖಂಡ ಹಿಂದುತ್ವದ ಅಜೆಂಡಾದೊಂದಿಗೆ ಇಳಿದು ಸ್ಪರ್ಧಿಸಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಈ ನಡುವೆ ಪಕ್ಷದಲ್ಲಿ ಕಳೆದ ಇಪ್ಪತ್ತೈದು ವರ್ಷ ಶಿಸ್ತಿನ ಸಿಪಾಯಿಯಂತೆ ದುಡಿದಿದ್ದ, ಐದು ವರ್ಷಗಳ ಕಾಲ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುದ್ದೆ ಅಲಂಕರಿಸಿ ಯಶಸ್ವಿಯಾಗಿ ಮುನ್ನಡೆಸಿದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕೂಡ ಉಡುಪಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲುವು ಸಾಧಿಸಿಕೊಳ್ಳುವ‌ ಉತ್ಸುಕತೆಯಲ್ಲಿದ್ದಾರೆ.

ಇನ್ನೊಂದೆಡೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಥಮ ಬಾರಿ ಶಾಸಕರಾಗಿ, ಮಂತ್ರಿಯಾಗಿ ಅಧಿಕಾರದ ಗದ್ದುಗೆ ಪಡೆದಿದ್ದ ಪ್ರಮೋದ್ ಮಧ್ವರಾಜ್ ಕಮಲದ ಕೈಹಿಡಿದ್ದರಿಂದ ಪಕ್ಷವು ಕಡೆ ಕ್ಷಣದಲ್ಲಿ ಅವರನ್ನೂ ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನುವುದನ್ನ ಅಲ್ಲಗಳೆಯುವಂತಿಲ್ಲ.

ಉಡುಪಿಯ ನಗರಸಭಾ ಸದಸ್ಯರೋರ್ವರು ಯಾವುದೇ ಪ್ರಚಾರ ಭಯಸದೇ ಸಮಾಜಮುಖಿ ಕಾರ್ಯಗಳನ್ನು ಉಡುಪಿ, ಕಾಪು, ಬ್ರಹ್ಮಾವರ ಭಾಗದಲ್ಲಿ ನಡೆಸುತ್ತಿದ್ದು ಮಾತ್ರವಲ್ಲದೆ, ತನ್ನ ವಾರ್ಡ್ ನಲ್ಲೂ ಜನಪರ ಕಾರ್ಯಗಳನ್ನು ಸ್ವತಃ ಕೈಗೆತ್ತಿಕೊಂಡು ಶುದ್ಧ ಹಸ್ತದ ಯುವ ನಾಯಕನನ್ನು ಆರ್ ಎಸ್ ಎಸ್ ನ ಹಿರಿಯ ನಾಯಕರು ಗುರುತಿಸಿದ್ದಾರೆ ಎನ್ನಲಾಗಿದೆ. ಕೊನೆಯ ಗಳಿಗೆಯಲ್ಲಿ ಅವರೇ ಉಡುಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡರೂ ಅಚ್ಚರಿಯಿಲ್ಲ.

ಇನ್ನೊಂದೆಡೆ ಬ್ರಹ್ಮಾವರ ಕ್ಷೇತ್ರ ವಿಂಗಡಣೆ ಬಳಿಕ ಮೊದಲ ಬಾರಿಗೆ ಗ್ರಾಮಾಂತರ ಭಾಗವೊಂದು ತಾಲೂಕು ಕೇಂದ್ರವಾಗಿದ್ದು.

ಈ ಭಾಗದಲ್ಲೂ ಯುವ ನಾಯಕ,‌ನ್ಯಾಯವಾದಿ ಸುಪ್ರಸಾದ್ ಶೆಟ್ಟಿ ಅವರೂ ತಮ್ಮ ಪ್ರಭಾವ ಬಳಿಸಿಕೊಂಡು ಸ್ಪರ್ಧಿಸಲು ತಯಾರಿದ್ದು, ಈಗಾಗಲೇ ಬ್ರಹ್ಮಾವರ ಮಾತ್ರವಲ್ಲದೆ ಉಡುಪಿಯ ನಗರದಲ್ಲೂ ತಮ್ಮ ಅನೇಕ ಯುವ‌ ಕಾರ್ಯತರ ತಂಡವೂ ಅವರ ಬೆಂಬಲಕ್ಕಿದೆ. ವಿಶ್ವಹಿಂದೂ ಪರಿಷತ್ತು, ಭಜರಂಗದಳ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದ ಇವರಿಗೂ ಟಿಕೆಟ್ ಲಭಿಸಿದರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಉಮೇಶ್ ಮಾರ್ಪಳ್ಳಿ, ಉಡುಪಿ ಟೈಮ್ಸ್

Leave a Reply

Your email address will not be published. Required fields are marked *

error: Content is protected !!